ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಗೆ 'ಟೋಲ್' ಬಿಸಿ: ಸ್ಮಾರ್ಟ್ ಸಿಟಿ ನಿರ್ಧಾರಕ್ಕೆ ಸಾರ್ವಜನಿಕ ಆಕ್ರೋಶ
- sathyapathanewsplu
- Nov 5
- 1 min read

ಮಂಗಳೂರು: ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಗೊಂಡು ಕಂಗೊಳಿಸುತ್ತಿರುವ ಮಂಗಳೂರಿನ ಕದ್ರಿ ಪಾರ್ಕ್ ರಸ್ತೆಗೆ ಇನ್ಮುಂದೆ 'ಟೋಲ್' ಮಾದರಿಯ ಪಾರ್ಕಿಂಗ್ ಶುಲ್ಕ ವಿಧಿಸಲು ಸ್ಮಾರ್ಟ್ ಸಿಟಿ ನಿರ್ಧರಿಸಿದೆ. ಸಾವಿರಾರು ಮಂದಿ ಪ್ರತಿದಿನ ವಾಯು ವಿಹಾರ ಹಾಗೂ ವಿಶ್ರಾಂತಿಗಾಗಿ ಭೇಟಿ ನೀಡುವ ಕಡಲ ತಡಿಯ ಈ ಫೇವರೇಟ್ ಸ್ಪಾಟ್‌ಗೆ ಜನವರಿಯಿಂದ ಶುಲ್ಕದ ಬಿಸಿ ತಟ್ಟಲಿದೆ. ಪಾರ್ಕ್‌ನ ರಸ್ತೆಯಲ್ಲಿ ವಾಹನಗಳ ನಿಲುಗಡೆಗೆ ಟೋಲ್ ಮಾದರಿಯ ವ್ಯವಸ್ಥೆ ಜಾರಿಗೆ ತರಲು ತೀರ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ.
ಕದ್ರಿ ಪಾರ್ಕ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗಡಿಗಳ ನಿರ್ವಹಣೆಯ ಟೆಂಡರ್ ಪಡೆದಿರುವ ಖಾಸಗಿ ಸಂಸ್ಥೆಗೆ ನಿರೀಕ್ಷಿತ ಆದಾಯ ಸಿಗದಿರುವ ಹಿನ್ನೆಲೆಯಲ್ಲಿ ಸ್ಮಾರ್ಟ್ ಸಿಟಿ ಈ ಕಠಿಣ ನಿರ್ಧಾರ ಕೈಗೊಂಡಿದೆ ಎಂದು ತಿಳಿದುಬಂದಿದೆ.
ಇದರ ಅನ್ವಯ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ವಾಹನದ ನಂಬರ್ ಪ್ಲೇಟ್‌ನ ಇಮೇಜ್ ಸೆರೆಹಿಡಿದು ಅದನ್ನು ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಲಾಗುತ್ತದೆ. ವಾಹನಗಳು 5 ನಿಮಿಷದ ಒಳಗೆ ರಸ್ತೆಯಿಂದ ತೆರಳಿದರೆ ಯಾವುದೇ ಶುಲ್ಕ ಕಡಿತವಾಗುವುದಿಲ್ಲ, ಆದರೆ 5 ನಿಮಿಷ ಕಳೆದರೆ ₹50 ಶುಲ್ಕ ಕಡಿತವಾಗಲಿದೆ. ಅಂಗಡಿಗಳು, ರಸ್ತೆ ಫುಟ್‌ಪಾತ್ ಮತ್ತು ಪಾರ್ಕಿಂಗ್ ಜಾಗವನ್ನು ನಿರ್ವಹಿಸುವ ಸಂಸ್ಥೆಯೇ ಈ ಶುಲ್ಕ ಸಂಗ್ರಹಿಸಲಿದೆ.
ಪಾರ್ಕ್ ರಸ್ತೆಗೆ ಹೆದ್ದಾರಿಯಂತೆ ಶುಲ್ಕ ವಿಧಿಸುವ ಸ್ಮಾರ್ಟ್ ಸಿಟಿಯ ಕ್ರಮದ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಟೋಲ್ ರೀತಿಯ ಶುಲ್ಕ ವಿಧಿಸಿದರೆ ಜನರು ಪಾರ್ಕ್‌ಗೆ ಬರುವುದು ಹೇಗೆ ಎಂಬ ಪ್ರಶ್ನೆಯನ್ನು ಸಾರ್ವಜನಿಕರು ಎತ್ತಿದ್ದಾರೆ. ಅಲ್ಲದೆ, ಇದು ಸುಗಮ ವಾಹನ ಸಂಚಾರಕ್ಕೆ ತೊಡಕನ್ನು ಉಂಟುಮಾಡುತ್ತದೆ ಎಂದು ದೂರಲಾಗಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಈ ರಸ್ತೆಗೆ ಟೋಲ್ ಮಾದರಿಯ ಶುಲ್ಕವನ್ನು ವಿಧಿಸಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
For Advertisement Contact:
Would you like to promote your business, service, or product on our sathyapatha news plus website?
Please contact for advertisements: 9880834166 / WhatsApp






Comments