ಅಕ್ರಮ ಗೋ ಸಾಗಾಟ: ನರಿಮೊಗರು ಬಳಿ ವಾಹನ ಕೆಟ್ಟು ನಿಂತು ಗೋವುಗಳನ್ನು ಬಿಟ್ಟು ಪರಾರಿ
- sathyapathanewsplu
- Nov 29
- 1 min read

ಪುತ್ತೂರು: ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದ ಗಡಿಪಿಲ ಎಂಬಲ್ಲಿ ಇಂದು ಶನಿವಾರ ಮುಂಜಾನೆ ಅಕ್ರಮ ಗೋ ಸಾಗಾಟಕ್ಕೆ ಯತ್ನಿಸಿದ ಘಟನೆಯೊಂದು ನಡೆದಿದೆ. ಮುಂಜಾನೆ ಸುಮಾರು 5 ಗಂಟೆಯ ಸುಮಾರಿಗೆ ಗೋವುಗಳನ್ನು ತುಂಬಿಕೊಂಡು ಬರುತ್ತಿದ್ದ ವಾಹನವು ತಾಂತ್ರಿಕ ದೋಷದಿಂದ ಕೆಟ್ಟು ನಿಂತಿದೆ ಎಂದು ತಿಳಿದುಬಂದಿದೆ. ವಾಹನ ಕೆಟ್ಟು ನಿಂತದ್ದನ್ನು ಅರಿತ ಗೋ ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳು ವಾಹನದಲ್ಲಿದ್ದ ಗೋವುಗಳನ್ನು ನಡುರಸ್ತೆಯಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾರೆ.
ಈ ಘಟನೆಯ ಕುರಿತು ಮಾಹಿತಿ ಪಡೆದ ತಕ್ಷಣ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್‌ನ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆಯ ವೇಳೆ ಯಾವುದೇ ವಾರೀಸುದಾರರಿಲ್ಲದ ಸ್ಥಿತಿಯಲ್ಲಿ ಗೋವುಗಳು ರಸ್ತೆಯ ಮೇಲೆ ಪತ್ತೆಯಾಗಿವೆ. ಬಳಿಕ ಕಾರ್ಯಕರ್ತರು ಈ ಘಟನೆಯ ಬಗ್ಗೆ ಸಮಗ್ರ ಮಾಹಿತಿ ಹಾಗೂ ದೂರು ದಾಖಲಿಸಲು ಪುತ್ತೂರು ನಗರ ಪೊಲೀಸ್ ಠಾಣೆಗೆ ತೆರಳಿದ್ದಾರೆ.
ನಡುರಸ್ತೆಯಲ್ಲಿ ಪತ್ತೆಯಾದ ಈ ಗೋವುಗಳನ್ನು ಕಳವು ಮಾಡಿ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು ಎಂಬ ಸಂಶಯವನ್ನು ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ, ವಾಹನ ಹಾಗೂ ಗೋ ಸಾಗಾಟದ ಹಿಂದಿರುವ ವ್ಯಕ್ತಿಗಳ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ಕಳ್ಳತನ ಮತ್ತು ಅಕ್ರಮ ಸಾಗಾಟದ ಕುರಿತು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಟ್ರಸ್ಟ್ ಆಗ್ರಹಿಸಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.






Comments