ಉಪ್ಪಿನಂಗಡಿ: ಅಡಿಕೆ ಬೆಳೆಗಾರರಿಗೆ ವಿಮಾ ಪರಿಹಾರದಲ್ಲಿ ಅನ್ಯಾಯ
- sathyapathanewsplu
- Dec 12
- 1 min read

ಪುತ್ತೂರು: ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಅಡಿಕೆ ಕೃಷಿಕರಿಗೆ ಬಿಡುಗಡೆಯಾಗಿರುವ ಪರಿಹಾರ ಮೊತ್ತವು ಅನ್ಯಾಯದಿಂದ ಕೂಡಿದೆ. ಕೃಷಿಕರು ಮತ್ತು ಸರ್ಕಾರದಿಂದ ಒಟ್ಟು ಪಾವತಿಯಾದ ವಿಮಾ ಕಂತಿಗೆ ಹೋಲಿಸಿದರೆ ಪರಿಹಾರ ಮೊತ್ತವು ಬಹಳ ಕಡಿಮೆಯಾಗಿದ್ದು, ಈ ಅನ್ಯಾಯವನ್ನು ಸರಿಪಡಿಸಲು ರಾಜ್ಯ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಒತ್ತಾಯಿಸಿ ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ವತಿಯಿಂದ ಪುತ್ತೂರು ಸಹಾಯಕ ಕಮಿಷನರ್ ಅವರಿಗೆ ಮನವಿ ಸಲ್ಲಿಸಲಾಯಿತು.
ಉಪ್ಪಿನಂಗಡಿ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷರಾದ ಸುನೀಲ್ ಕುಮಾರ್ ದಡ್ಡು ಅವರು ಈ ಸಂದರ್ಭದಲ್ಲಿ ಮಾತನಾಡಿ, ಅಡಿಕೆ ಕೃಷಿಕರ ಬೆಳೆ ವಿಮೆಗೆ ಸಂಬಂಧಿಸಿದಂತೆ ಎಕರೆಯೊಂದಕ್ಕೆ ಕೃಷಿಕರು ₹2,590, ಕೇಂದ್ರ ಸರ್ಕಾರ ₹5,180 ಹಾಗೂ ರಾಜ್ಯ ಸರ್ಕಾರವು ₹10,360 ಸೇರಿದಂತೆ ಒಟ್ಟು ₹18,130 ವಿಮಾ ಕಂತನ್ನು ಪಾವತಿಸಲಾಗಿದೆ. ಆದರೆ, ಅತಿವೃಷ್ಟಿಯಿಂದ ಹಾನಿಗೀಡಾದ ಕೃಷಿಕರಿಗೆ ವಿಮಾ ಪರಿಹಾರ ಧನವಾಗಿ ಕೇವಲ ₹10,441 ಅನ್ನು ಮಾತ್ರ ಬಿಡುಗಡೆ ಮಾಡಿರುವುದು ಅತ್ಯಂತ ಅನ್ಯಾಯವಾಗಿದೆ. ಒಟ್ಟು ಕಂತು ಪಾವತಿಗೆ ಹೋಲಿಸಿದರೆ ಈ ಪರಿಹಾರ ಮೊತ್ತವು ಸಮರ್ಪಕವಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿಕರ ಪರವಾಗಿ ನಿಂತು ಸರ್ಕಾರವು ವಿಮಾ ಕಂಪನಿಗಳ ಈ ಅನ್ಯಾಯದ ನಡೆಯ ಬಗ್ಗೆ ತ್ವರಿತಗತಿಯಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಅಡಿಕೆ ಕೃಷಿಕರಿಗೆ ನ್ಯಾಯಯುತ ಪರಿಹಾರ ಒದಗಿಸಬೇಕು ಎಂದು ಮನವಿಯ ಮೂಲಕ ಒತ್ತಾಯಿಸಲಾಯಿತು. ಈ ಮನವಿ ಸಲ್ಲಿಕೆಯ ನಿಯೋಗದಲ್ಲಿ ಸಂಘದ ಉಪಾಧ್ಯಕ್ಷ ದಯಾನಂದ ಸರೋಳಿ, ನಿರ್ದೇಶಕರುಗಳಾದ ರಾಜೇಶ್, ವಸಂತ ಗೌಡ ಪಿಜಕ್ಕಳ, ಉಷಾ ಮುಳಿಯ, ಸಂಧ್ಯಾ ಸುಂದರ ಎನ್., ಬಜತ್ತೂರು ಮತ್ತು ಹಿರೆಬಂಡಾಡಿ ಗ್ರಾಮ ಪಂಚಾಯತಿ ಸದಸ್ಯರು ಹಾಗೂ ಪ್ರಮುಖರು ಉಪಸ್ಥಿತರಿದ್ದರು.






Comments