ಮುಂಡಗೋಡು: ಪೊಲೀಸರ ಭರ್ಜರಿ ಕಾರ್ಯಾಚರಣೆ; 8 ಲಕ್ಷ ಮೌಲ್ಯದ ಚರಸ್ ಸಹಿತ ಇಂಜಿನಿಯರ್ ಬಂಧನ
- sathyapathanewsplu
- Nov 23
- 1 min read

ಮುಂಡಗೋಡು: ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ಪೊಲೀಸರು ಮಾದಕ ದ್ರವ್ಯ ಮಾರಾಟ ಜಾಲದ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮವಾಗಿ ಮಾರಾಟ ಮಾಡಲು ಯತ್ನಿಸುತ್ತಿದ್ದ ಸುಮಾರು 8 ಲಕ್ಷ ರೂಪಾಯಿ ಮೌಲ್ಯದ 781 ಗ್ರಾಂ ನಿಷೇಧಿತ ಮಾದಕ ವಸ್ತು 'ಚರಸ್' ಅನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಮುಂಡಗೋಡಿನ ಸುಭಾಷ್ ನಗರದ ನಿವಾಸಿ, ವೃತ್ತಿಯಲ್ಲಿ ಇಂಜಿನಿಯರ್ ಆಗಿರುವ ಸಚಿನ್ ಟೇಕಬಹುದ್ದೂರ್ ಗೋರ್ಖಾ (26) ಎಂದು ಗುರುತಿಸಲಾಗಿದೆ. ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಮುಂಡಗೋಡು ಠಾಣೆಯ ಸಿ.ಪಿ.ಐ ರಂಗನಾಥ್ ನೀಲಮ್ಮನವರ್ ಹಾಗೂ ಪಿ.ಎಸ್.ಐ ಯಲ್ಲಾಲಿಂಗ ಕುನ್ನೂರು ನೇತೃತ್ವದ ಪೊಲೀಸ್ ತಂಡ, ನಗರದ ಬಸ್ ಡಿಪೋ ಬಳಿ ಬೈಕ್‌ನಲ್ಲಿ ಚರಸ್ ಸಾಗಾಟ/ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ದಾಳಿ ನಡೆಸಿ ಆರೋಪಿಯನ್ನು ಸೆರೆಹಿಡಿದಿದೆ.
ಆರೋಪಿಯು ಈ ಮಾದಕ ವಸ್ತುವನ್ನು ಮುಂಡಗೋಡು ಟಿಬೇಟಿಯನ್ ಕ್ಯಾಂಪ್‌ನಲ್ಲಿ ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದನು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಸುಶಿಕ್ಷಿತ ಇಂಜಿನಿಯರ್ ಒಬ್ಬರು ಇಂತಹ ಅಕ್ರಮ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.






Comments