ಪಂಜ : ಕಾಡುಪ್ರಾಣಿ ಡಿಕ್ಕಿ: ಕುಕ್ಕೆ ಮಠದ ಅರ್ಚಕ ಗಂಭೀರ, ಆಸ್ಪತ್ರೆಗೆ ದಾಖಲು
- sathyapathanewsplu
- 6 days ago
- 1 min read

ಪಂಜ: ಕುಕ್ಕೆ ಸುಬ್ರಹ್ಮಣ್ಯ ಮಠಕ್ಕೆ ಪೂಜೆಗೆಂದು ತೆರಳುತ್ತಿದ್ದ ಅರ್ಚಕರೊಬ್ಬರ ದ್ವಿಚಕ್ರ ವಾಹನಕ್ಕೆ ಕಾಡುಪ್ರಾಣಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿ. 12ರ ಮುಂಜಾನೆ ಪಂಜ ಸಮೀಪ ನಡೆದಿದೆ.
ಗಾಯಾಳು ಅರ್ಚಕರನ್ನು ಪಂಜ ಗ್ರಾಮದ ನಿವಾಸಿ ವಾಸು ಭಟ್ ಎಂದು ಗುರುತಿಸಲಾಗಿದೆ.
ವಾಸು ಭಟ್ ಅವರು ಮುಂಜಾನೆ ಸುಮಾರು 4 ರಿಂದ 5 ಗಂಟೆಯ ವೇಳೆಯಲ್ಲಿ ಪಂಜದ ತಮ್ಮ ಮನೆಯಿಂದ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ನೆರವೇರಿಸಲು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ, ಬಳ್ಳ ಸಮೀಪದ ಎಡೋಣಿ ಪ್ರದೇಶದಲ್ಲಿ ರಸ್ತೆಗೆ ಅಡ್ಡ ಬಂದ ಕಡವೆಯಂತಹ ಕಾಡುಪ್ರಾಣಿಯೊಂದು ಅವರ ದ್ವಿಚಕ್ರ ವಾಹನಕ್ಕೆ ರಭಸವಾಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ವಾಸು ಭಟ್ ಅವರು ಬೈಕ್‌ನಿಂದ ರಸ್ತೆಗೆ ಎಸೆಯಲ್ಪಟ್ಟು ತೀವ್ರವಾಗಿ ಗಾಯಗೊಂಡಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಪ್ರಾಣಿಯ ಕೂದಲುಗಳು ಕಂಡುಬಂದಿದ್ದು, ಕಾಡುಪ್ರಾಣಿಯೇ ಡಿಕ್ಕಿ ಹೊಡೆದಿರುವ ಬಗ್ಗೆ ಮೇಲ್ನೋಟಕ್ಕೆ ದೃಢಪಟ್ಟಿದೆ.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ವಾಸು ಭಟ್ ಅವರನ್ನು ತಕ್ಷಣ ಸ್ಥಳೀಯರು ಹಾಗೂ ಸಹಾಯಕ್ಕೆ ಬಂದವರು ಆಂಬುಲೆನ್ಸ್ ಮೂಲಕ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ತಲೆಗೆ ಮತ್ತು ದೇಹಕ್ಕೆ ತೀವ್ರ ಪೆಟ್ಟು ಬಿದ್ದ ಕಾರಣ ಹೆಚ್ಚಿನ ತುರ್ತು ಚಿಕಿತ್ಸೆಗಾಗಿ ಅವರನ್ನು ತಕ್ಷಣವೇ ಮಂಗಳೂರಿನ ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಕಾಡಿನಂಚಿನ ರಸ್ತೆಯಲ್ಲಿ ಮುಂಜಾನೆ ಸಂಚರಿಸುವವರು ಎಚ್ಚರಿಕೆ ವಹಿಸಬೇಕೆಂದು ಈ ಘಟನೆ ಎಚ್ಚರಿಸಿದೆ. ಈ ಕುರಿತು ಪಂಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.






Comments