ಪಡೀಲ್-ಕಣ್ಣೂರು ಮುಖ್ಯ ಪೈಪ್‌ಲೈನ್ ಹಾನಿ: ಮಂಗಳೂರು ನಗರಕ್ಕೆ ಎರಡು ದಿನದಿಂದ ನೀರು ಪೂರೈಕೆ ಸ್ಥಗಿತ
- sathyapathanewsplu
- Nov 19
- 1 min read

ಮಂಗಳೂರು: ನಗರದ ವಿವಿಧ ಪ್ರದೇಶಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ ಪಡೀಲ್-ಕಣ್ಣೂರು ಬಳಿ ಕಾಮಗಾರಿಯ ವೇಳೆ ಹಾನಿಗೊಳಗಾದ ಕಾರಣ ಸೋಮವಾರ ಮತ್ತು ಮಂಗಳವಾರ ನಗರದಲ್ಲಿ ನೀರು ಪೂರೈಕೆ ಸಂಪೂರ್ಣ ಸ್ಥಗಿತಗೊಂಡಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಮಂಗಳೂರು ನಗರದಾದ್ಯಂತ ತೀವ್ರ ನೀರಿನ ಸಮಸ್ಯೆ ತಲೆದೋರಿದ್ದು, ಜನಜೀವನ ಅಸ್ತವ್ಯಸ್ತಗೊಂಡು ಜನರು ಪರದಾಡುವಂತಾಗಿದೆ.
ತುಂಬೆ ಡ್ಯಾಂನಿಂದ ಪಡೀಲ್ ಟ್ಯಾಂಕ್‌ಗೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಲೈನ್ 18 ಅಡಿ ಆಳದಲ್ಲಿ ಹಾದುಹೋಗಿದ್ದು, ಈ ಪೈಪ್‌ಲೈನ್‌ಗೆ ಹಾನಿಯಾಗಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ. ಪಡೀಲ್ ಪಂಪೌಸ್‌ನಿಂದ ನೀರು ಪಡೆಯುವ ನಗರದ ಹಲವು ಪ್ರಮುಖ ಪ್ರದೇಶಗಳಾದ ಪಡೀಲ್, ಮರೋಳಿ, ಕಂಕನಾಡಿ, ಮಂಗಳಾದೇವಿ, ಜೆಪ್ಪು, ಕಣ್ಣೂರು, ಶಕ್ತಿನಗರ, ಮಣ್ಣಗುಡ್ಡ, ಪಾಂಡೇಶ್ವರ, ಬಜಾಲ್, ಕಾರ್ಸ್ಟ್ರೀಟ್, ಅತ್ತಾವರ, ಚಿಲಿಂಬಿ, ಆಶೋಕನಗರ, ಕುಡುಪು, ವಾಮಂಜೂರು, ಬೋಂದೆಲ್, ಕಾವೂರು, ಮರಕಡ ಸೇರಿದಂತೆ ಹಲವು ಪ್ರದೇಶಗಳಿಗೆ ಮಂಗಳವಾರವೂ ನೀರು ಪೂರೈಕೆ ಸ್ಥಗಿತಗೊಂಡಿತ್ತು.
ಹಾನಿಗೊಳಗಾದ ಪೈಪ್‌ಲೈನ್ ಅನ್ನು ಸರಿಪಡಿಸುವ ಕಾರ್ಯ ಭರದಿಂದ ಸಾಗುತ್ತಿದೆ. ಪೈಪ್‌ನ ಮೇಲಿದ್ದ ಮಣ್ಣನ್ನು ಮಂಗಳವಾರ ದಿನವಿಡೀ ಜೆಸಿಬಿ ಹಾಗೂ ಟಿಪ್ಪರ್‌ಗಳನ್ನು ಬಳಸಿ ತೆರವುಗೊಳಿಸಲಾಗಿದೆ. ಇದೀಗ ಹಾನಿಗೊಳಗಾದ ಪೈಪ್‌ನ ಸ್ಥಳವು ಪತ್ತೆಯಾಗಿದ್ದರೂ, ಹೊಂಡದಲ್ಲಿ ಸಂಗ್ರಹವಾಗಿರುವ ನೀರನ್ನು ಸಂಪೂರ್ಣವಾಗಿ ಖಾಲಿ ಮಾಡುವ ಕೆಲಸ ಮುಂದುವರಿದಿದೆ. ಈ ಪೈಪ್ ಅನ್ನು ತುಂಡು ಮಾಡಿ, ಮರು-ವೆಲ್ಡಿಂಗ್ ಮಾಡಬೇಕಿರುವುದರಿಂದ ಈ ದುರಸ್ತಿ ಕಾರ್ಯಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗುತ್ತದೆ ಎಂದು ಮಂಗಳೂರು ಮಹಾನಗರ ಪಾಲಿಕೆ (ಮನಪಾ) ನೀರು ಸರಬರಾಜು ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.






Comments