ವಿಡಿಯೋ ಮಾಡಿ ಸಮುದ್ರಕ್ಕೆ ಹಾರಲು ಹೋಗಿದ್ದ ತಂದೆ-ಮಗಳ ರಕ್ಷಣೆ; ಪೊಲೀಸರ ಸಮಯಪ್ರಜ್ಞೆಗೆ ಸಾರ್ವಜನಿಕರ ಮೆಚ್ಚುಗೆ
- sathyapathanewsplu
- Nov 5
- 1 min read

ಪತ್ನಿಯೊಂದಿಗೆ ಉಂಟಾಗಿದ್ದ ಮನಸ್ತಾಪದಿಂದ ಬೇಸತ್ತ ಪತಿಯೊಬ್ಬರು ತನ್ನ ನಾಲ್ಕು ವರ್ಷದ ಪುತ್ರಿಯೊಂದಿಗೆ ಸಮುದ್ರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ, ಬಳಿಕ ಮನೆಗೆ ಬಂದು ನೇಣು ಹಾಕಿಕೊಳ್ಳಲು ಸಿದ್ಧವಾಗಿದ್ದ ಘಟನೆ ಮಂಗಳೂರಿನ ಕಾವೂರಿನಲ್ಲಿ ನಡೆದಿದೆ. ಸಾವಿಗೆ ಮುನ್ನ ವಿಡಿಯೋ ಮಾಡಿ ಅದನ್ನು ವಾಟ್ಸಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದು, ಈ ವಿಡಿಯೋ ಪಣಂಬೂರು ಪೊಲೀಸರಿಗೆ ತಲುಪಿದ ಕೂಡಲೇ ಅವರು ಸಮಯ ಪ್ರಜ್ಞೆ ಮೆರೆದು ತಂದೆ-ಮಗಳನ್ನು ಸಾವಿನ ದವಡೆಯಿಂದ ಪಾರು ಮಾಡಿದ್ದಾರೆ. ರಕ್ಷಿಸಲ್ಪಟ್ಟ ವ್ಯಕ್ತಿಯು ಕಾವೂರು ಶಾಂತಿನಗರ ನಿವಾಸಿ ರಾಜೇಶ್ ಎಂದು ಗುರುತಿಸಲಾಗಿದೆ. ಏಳು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿಗೆ ನಾಲ್ಕು ವರ್ಷದ ಮಗಳಿದ್ದಾಳೆ. ಇತ್ತೀಚೆಗೆ ರಾಜೇಶ್ ತನ್ನ ಪತ್ನಿಯ ಬಗ್ಗೆ ಅನುಮಾನ ಪಡುತ್ತಿದ್ದರು ಎನ್ನಲಾಗಿದೆ.
ಸೋಮವಾರ ಸಂಜೆ ರಾಜೇಶ್ ತಮ್ಮ ಮಗಳೊಂದಿಗೆ ತಣ್ಣೀರುಬಾವಿ ಬೀಚ್‌ಗೆ ತೆರಳಿದ್ದರು. "ನಾವು ಸಾಯೋಣ ಮಗಳೇ, ನಿನ್ನ ತಾಯಿ ಸರಿ ಇಲ್ಲ, ನಮಗೆ ಯಾರೂ ಬೇಡ" ಎಂದು ಹೇಳುತ್ತಾ ನೀರಿನತ್ತ ನಡೆಯುವ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ. ಈ ವಿಡಿಯೋವನ್ನು ತನ್ನ ಅಕ್ಕ ಮತ್ತು ಇತರ ಸಂಬಂಧಿಕರಿಗೆ ಕಳುಹಿಸಿದ್ದರು. ವಿಡಿಯೋ ಕ್ಷಣಾರ್ಧದಲ್ಲಿ ಹಂಚಿಕೆಯಾಗಿದ್ದು, ಸಂಜೆ 7 ಗಂಟೆ ಸುಮಾರಿಗೆ ಪಣಂಬೂರು ಪೊಲೀಸರ ಕೈ ಸೇರಿತ್ತು. ವಿಡಿಯೋದಲ್ಲಿ ಮುಖ ಸ್ಪಷ್ಟವಾಗಿ ಇರದಿದ್ದರೂ, ಸಮುದ್ರದ ಕಡೆಗೆ ನಡೆಯುವ ತಂದೆ-ಮಗಳ ನೆರಳು ಮಾತ್ರ ಗೋಚರಿಸಿತ್ತು. ಕೂಡಲೇ ಎಚ್ಚೆತ್ತ ಇನ್ಸ್‌ಪೆಕ್ಟರ್ ಮಹಮ್ಮದ್ ಸಲೀಂ ಅವರು ವಿಡಿಯೋ ತಣ್ಣೀರುಬಾವಿ ಬೀಚ್‌ನಲ್ಲಿ ಮಾಡಲಾಗಿದೆ ಎಂದು ಊಹಿಸಿ, ಠಾಣೆಯ ಎಲ್ಲ ಸಿಬ್ಬಂದಿಯನ್ನು ಹುಡುಕಾಟಕ್ಕೆ ನಿಯೋಜಿಸಿದರು.
ಸೈಬರ್ ಪೊಲೀಸರ ಸಹಾಯದಿಂದ ರಾಜೇಶ್ ಅವರ ಮೊಬೈಲ್ ಲೊಕೇಶನ್ ಕಾವೂರು ಶಾಂತಿನಗರ ಎಂದು ಪತ್ತೆಯಾಯಿತು.
ಲೊಕೇಶನ್ ತಿಳಿದ ಕೂಡಲೇ ಇನ್ಸ್‌ಪೆಕ್ಟರ್ ಸಲೀಂ ಅವರು ಕಾವೂರು ಠಾಣೆಗೆ ಮಾಹಿತಿ ನೀಡಿ, ಪಣಂಬೂರು ಠಾಣೆಯಿಂದ ಫಕೀರಪ್ಪ ಶರಣಪ್ಪ ಮತ್ತು ರಾಕೇಶ್ ಅವರಿದ್ದ ತಂಡವನ್ನು ಸ್ಥಳಕ್ಕೆ ಕಳಿಸಿಕೊಟ್ಟರು. ಪೊಲೀಸರು 10 ನಿಮಿಷಗಳಲ್ಲಿ ಮನೆ ತಲುಪಿದಾಗ ಬಾಗಿಲು ಹಾಕಲಾಗಿತ್ತು. ಒಳಗೆ ಯಾರಿಂದಲೂ ಪ್ರತಿಕ್ರಿಯೆ ಬಾರದ ಕಾರಣ, ಇನ್ಸ್‌ಪೆಕ್ಟರ್ ಸೂಚನೆಯಂತೆ ಬಾಗಿಲು ಒಡೆದು ಒಳಗೆ ಹೋದರು. ಆಗ ರಾಜೇಶ್ ಅವರು ಪಟ್ಟಿಗೆ ನೇಣು ಹಗ್ಗ ಸಿದ್ಧಪಡಿಸಿ ಮಗಳ ಜೊತೆಗೆ ನೇಣಿಗೆ ಶರಣಾಗಲು ತಯಾರಾಗುತ್ತಿದ್ದರು. ಕೂಡಲೇ ಪೊಲೀಸರು ಆತನನ್ನು ಹಿಡಿದು ಕ್ಷಿಪ್ರ ಕಾರ್ಯಾಚರಣೆಯ ಮೂಲಕ ಅಮೂಲ್ಯ ಜೀವಗಳನ್ನು ಉಳಿಸಿದರು.
ಪೊಲೀಸರ ಸಕಾಲಿಕ ಪ್ರಯತ್ನ ಮತ್ತು ಸಮಯ ಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದ್ದು, ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅವರೂ ಸೇರಿದಂತೆ ಸಾರ್ವಜನಿಕ ವಲಯದಿಂದ ಪೊಲೀಸರಿಗೆ ಪ್ರಶಂಸೆ ವ್ಯಕ್ತವಾಗಿದೆ. ಕಾವೂರು ಠಾಣೆಯಲ್ಲಿ ದಂಪತಿಗಳಿಗೆ ಬುದ್ಧಿವಾದ ಹೇಳಿ, ಮಾತುಕತೆ ನಡೆಸಲಾಗಿದೆ.






Comments