ಮಾದಕವಸ್ತು ಮಾರಾಟ: ಇಬ್ಬರ ಬಂಧನ, ₹4 ಲಕ್ಷಕ್ಕೂ ಹೆಚ್ಚು ಮೌಲ್ಯದ ಎಂಡಿಎಂಎ ವಶ!
- sathyapathanewsplu
- Nov 7
- 1 min read

ಮಂಗಳೂರು ನಗರದ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ (MDMA) ಅನ್ನು ಸರಬರಾಜು ಮಾಡುತ್ತಿದ್ದ ಇಬ್ಬರನ್ನು ಮಂಗಳೂರು ಸಿಸಿಬಿ (CCB) ಪೊಲೀಸರು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳಿಂದ ಒಟ್ಟು 24.57 ಗ್ರಾಂ ತೂಕದ ಎಂಡಿಎಂಎ ಮಾದಕ ವಸ್ತುವಿನ ಜೊತೆಗೆ, ಮಾರಾಟಕ್ಕೆ ಬಳಸುತ್ತಿದ್ದ ವಾಹನಗಳು, ಮೊಬೈಲ್ ಫೋನ್‌ಗಳು ಮತ್ತು ಇತರೆ ವಸ್ತುಗಳ ಸಹಿತ ಒಟ್ಟು ₹4,35,500/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕಾರ್ಯಾಚರಣೆಯು ಮಾದಕವಸ್ತು ಜಾಲಕ್ಕೆ ದೊಡ್ಡ ಹೊಡೆತ ನೀಡಿದ್ದು, ಪ್ರಕರಣಗಳ ಕುರಿತು ಸಂಬಂಧಿಸಿದ ಪೊಲೀಸ್ ಠಾಣೆಗಳಲ್ಲಿ ಕೇಸು ದಾಖಲಾಗಿದೆ.
ಮೊದಲ ಪ್ರಕರಣದಲ್ಲಿ, ದಿನಾಂಕ 04-11-2025 ರಂದು ಮಂಗಳೂರು ನಗರದ ಬಂದರು ಮತ್ತು ದಕ್ಕೆ ಪ್ರದೇಶದಲ್ಲಿ ಆಟೋ ರಿಕ್ಷಾದಲ್ಲಿ ಮಾದಕವಸ್ತು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಕಾರ್ಯಪ್ರವೃತ್ತರಾದರು. ಆಟೋ ಚಾಲಕ ಅಬ್ದುಲ್ ಸಲಾಮ್ (39, ಎಸ್.ಹೆಚ್. ನಗರ, ದಯಾಂಬು, ಅಡ್ಯಾರ್, ಕಣ್ಣೂರು, ಮಂಗಳೂರು) ಎಂಬಾತನನ್ನು ಬಂಧಿಸಿ, ಆತನ ವಶದಿಂದ ₹1,20,000/- ಮೌಲ್ಯದ ಎಂಡಿಎಂಎ, ಆಟೋ ರಿಕ್ಷಾ, ಮೊಬೈಲ್ ಫೋನ್, ತೂಕಮಾಪಕ ಮತ್ತು ಖಾಲಿ ಜಿಪ್ ಲಾಕ್ ಕವರ್‌ಗಳು ಸೇರಿದಂತೆ ಒಟ್ಟು ₹2,30,500/- ಮೌಲ್ಯದ ವಸ್ತುಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. ಈ ಸಂಬಂಧ ದಕ್ಷಿಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡನೇ ಪ್ರಕರಣವು ದಿನಾಂಕ 06-11-2025 ರಂದು ವರದಿಯಾಗಿದ್ದು, ಬೋಳಿಯಾರು ಪರಿಸರದಲ್ಲಿ ಸಾರ್ವಜನಿಕರಿಗೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾದಕವಸ್ತು ಮಾರಾಟದ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಸಿಸಿಬಿ ಪೊಲೀಸರು ತಕ್ಷಣ ಕಾರ್ಯಾಚರಣೆ ನಡೆಸಿ, ಮೊಹಮ್ಮದ್ ನಾಸೀರ್ @ ಶಾಕೀರ್ @ ಚಾಕಿ (28, ಜಾರದೆ ಹೌಸ್, ಬೋಳಿಯಾರು, ಉಳ್ಳಾಲ) ಎಂಬಾತನನ್ನು ಬಂಧಿಸಿದ್ದಾರೆ. ಆತನ ವಶದಿಂದ ₹1,20,000/- ಮೌಲ್ಯದ ಎಂಡಿಎಂಎ, ಕಪ್ಪು ಬಣ್ಣದ ಯಮಹಾ FZ ಬೈಕ್, ಮೊಬೈಲ್ ಫೋನ್ ಮತ್ತು ಖಾಲಿ ಜಿಪ್ ಲಾಕ್ ಕವರ್‌ಗಳು ಸೇರಿದಂತೆ ಒಟ್ಟು ₹2,05,000/- ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದು, ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಮಾದಕವಸ್ತು ಮಾರಾಟ ಮತ್ತು ಸಾಗಾಟ ಜಾಲದಲ್ಲಿ ಇನ್ನೂ ಹಲವು ಆರೋಪಿಗಳು ಇರುವ ಬಗ್ಗೆ ಶಂಕೆ ಇದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.






Comments