ಉಪ್ಪಿನಂಗಡಿ: ಅಕ್ರಮ ಮರ ಸಾಗಾಟ ಪತ್ತೆ; ಲಾರಿ ಸಮೇತ ಚಾಲಕನ ಬಂಧನ
- sathyapathanewsplu
- Jan 3
- 1 min read

ನೆಲ್ಯಾಡಿ: ಯಾವುದೇ ಅಧಿಕೃತ ಪರವಾನಿಗೆ ಇಲ್ಲದೆ ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಉಪ್ಪಿನಂಗಡಿ ವಲಯ ಅರಣ್ಯ ಇಲಾಖಾಧಿಕಾರಿಗಳ ತಂಡ ಪತ್ತೆಹಚ್ಚಿದೆ. ಡಿಸೆಂಬರ್ 30ರಂದು ರಾತ್ರಿ ಈ ಕಾರ್ಯಾಚರಣೆ ನಡೆದಿದ್ದು, ಮರದ ದಿಮ್ಮಿಗಳು, ಲಾರಿ ಹಾಗೂ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ರಾತ್ರಿ ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ಈ ಅಕ್ರಮ ಬಯಲಾಗಿದೆ.
ಹಾಸನದ ಕಡೆಯಿಂದ ಬಂಟ್ವಾಳದತ್ತ ಸಾಗುತ್ತಿದ್ದ ಲಾರಿಯನ್ನು (KA 21, B 5787) ರಾಷ್ಟ್ರೀಯ ಹೆದ್ದಾರಿ 75ರ ಪೆರಿಯಶಾಂತಿ ಎಂಬಲ್ಲಿ ಅರಣ್ಯ ಅಧಿಕಾರಿಗಳು ಸಂಶಯದ ಮೇರೆಗೆ ತಡೆದು ಪರಿಶೀಲಿಸಿದ್ದಾರೆ. ಈ ವೇಳೆ ಲಾರಿಯಲ್ಲಿ ವಿವಿಧ ಕಾಡು ಜಾತಿಗೆ ಸೇರಿದ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿರುವುದು ದೃಢಪಟ್ಟಿದೆ. ಮರ ಸಾಗಾಟಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನುಬದ್ಧ ದಾಖಲೆಗಳು ಇಲ್ಲದ ಕಾರಣ, ಸಕಲೇಶಪುರ ಮೂಲದ ಚಾಲಕ ಕಾಂತ ಎಚ್.ಎಸ್. (48 ವರ್ಷ) ಎಂಬವರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಯತೀಂದ್ರ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಗಸ್ತು ವನಪಾಲಕರಾದ ವಿನಯಚಂದ್ರ, ಶಿವಾನಂದ ಕುದ್ರಿ, ವಾಹನ ಚಾಲಕ ಕಿಶೋರ್ ಹಾಗೂ ದಿನಕೂಲಿ ನೌಕರ ದಿನೇಶ್ ಅವರು ಭಾಗವಹಿಸಿದ್ದರು. ಜಪ್ತಿ ಮಾಡಲಾದ ಲಾರಿ ಮತ್ತು ಮರದ ದಿಮ್ಮಿಗಳನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದ್ದು, ಆರೋಪಿಯ ವಿರುದ್ಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿದೆ.





Comments