ಪುತ್ತೂರು ‘ಲವ್-ಸೆಕ್ಸ್-ಧೋಖಾ’ ಪ್ರಕರಣ: ಜನವರಿ 31ರೊಳಗೆ ಮದುವೆಯಾಗದಿದ್ದರೆ ಸಂಧಾನವಿಲ್ಲ - ಪ್ರತಿಭಾ ಕುಳಾಯಿ ಎಚ್ಚರಿಕೆ
- sathyapathanewsplu
- 3 hours ago
- 1 min read

ಮಂಗಳೂರು: ಪುತ್ತೂರಿನಲ್ಲಿ ಸಂಚಲನ ಮೂಡಿಸಿರುವ 'ಲವ್-ಸೆಕ್ಸ್-ಧೋಖಾ' ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಧಾನ ಪ್ರಕ್ರಿಯೆಗೆ ಜನವರಿ 31ರ ಗಡುವು ನೀಡಲಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಸದಸ್ಯೆ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ. ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಅವಧಿಯೊಳಗೆ ಮದುವೆ ನಡೆಯದಿದ್ದರೆ ಫೆಬ್ರವರಿ 7ರಂದು ಮಗುವಿನ ನಾಮಕರಣ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಿ, ಕಾನೂನು ಹೋರಾಟ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಆರೋಪಿ ಕೃಷ್ಣ ಜೆ. ರಾವ್ ಕುಟುಂಬದವರು ಮದುವೆಗೆ ಒಪ್ಪಿಗೆ ಸೂಚಿಸಿದ ಹಿನ್ನೆಲೆಯಲ್ಲಿ, ಜ. 24ಕ್ಕೆ ನಿಗದಿಯಾಗಿದ್ದ ಮಗುವಿನ ತೊಟ್ಟಿಲು ಶಾಸ್ತ್ರವನ್ನು ಸದ್ಯಕ್ಕೆ ಮುಂದೂಡಲಾಗಿದೆ. ಉಡುಪಿ ಒಕ್ಕೂಟದ ಪದಾಧಿಕಾರಿಗಳ ಮನವಿಯ ಮೇರೆಗೆ ಈ ನಿರ್ಧಾರ ತಳೆಯಲಾಗಿದ್ದರೂ, ಸಂಧಾನಕ್ಕೆ ವಿಧಿಸಿರುವ ಷರತ್ತುಗಳನ್ನು ಕುಟುಂಬ ನಿರಾಕರಿಸಿದೆ. "ಸಂಧಾನವು ಪೊಲೀಸ್ ಠಾಣೆ ಅಥವಾ ಎಸ್‌ಪಿ ಕಚೇರಿಯಲ್ಲೇ ನಡೆಯಬೇಕು. ಹಿಂದೆ ಮಗುವನ್ನು ಆಶ್ರಮಕ್ಕೆ ನೀಡುವಂತೆ ಅಥವಾ ವಿಚ್ಛೇದನ ನೀಡುವಂತೆ ಬೇಡಿಕೆ ಇಟ್ಟಿದ್ದರು. ಈ ಬಾರಿಯೂ ದಾರಿ ತಪ್ಪಿಸುವ ನಾಟಕ ನಡೆಯುತ್ತಿರುವ ಶಂಕೆ ಇದೆ" ಎಂದು ಪ್ರತಿಭಾ ಕುಳಾಯಿ ಆರೋಪಿಸಿದರು.
ಯಾವುದೇ ರೂಪದಲ್ಲಾದರೂ ಮದುವೆ ಕಾನೂನುಬದ್ಧವಾಗಿ ನಡೆಯಲಿ, ತಪ್ಪಿತಸ್ಥರಿಗೆ ಪ್ರಾಯಶ್ಚಿತವಾಗಲಿ ಎಂಬುದು ಸಂತ್ರಸ್ತ ಕುಟುಂಬದ ಬೇಡಿಕೆಯಾಗಿದೆ. ಒಂದು ವೇಳೆ ಜ. 31ರೊಳಗೆ ವಿವಾಹ ಪ್ರಕ್ರಿಯೆ ನಡೆಯದಿದ್ದರೆ ಮುಂದಿನ ದಿನಗಳಲ್ಲಿ ಯಾವುದೇ ಮಾತುಕತೆಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.





Comments