ಶಿಕ್ಷಣ ತಜ್ಞ, ನಿಟ್ಟೆ ಸಂಸ್ಥೆಗಳ ಸಂಸ್ಥಾಪಕ ಡಾ. ಎನ್. ವಿನಯ ಹೆಗ್ಡೆ ನಿಧನ: ಕರಾವಳಿಯ ಧೀಮಂತ ಚೇತನ ಇನ್ನಿಲ್ಲ
- sathyapathanewsplu
- Jan 1
- 1 min read

ಮಂಗಳೂರು: ನಿಟ್ಟೆ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರು ಹಾಗೂ ಪ್ರಸಿದ್ಧ ಶಿಕ್ಷಣ ತಜ್ಞರಾದ ಡಾ. ಎನ್. ವಿನಯ ಹೆಗ್ಡೆ (86) ಅವರು ಜನವರಿ 1ರ ಗುರುವಾರ ನಸುಕಿನ ಜಾವ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್ ಕೆ.ಎಸ್. ಹೆಗ್ಡೆ ಅವರ ಪುತ್ರರಾದ ಇವರು, ಕರಾವಳಿ ಭಾಗದಲ್ಲಿ ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದ್ದರು. ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರ ಹಿರಿಯ ಸಹೋದರರಾಗಿರುವ ಇವರು, ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ವಿನಯ ಹೆಗ್ಡೆ ಅವರು 1975ರಲ್ಲಿ 'ಲೆಮಿನಾ ಸಸ್ಪೆನ್ಷನ್' ಎಂಬ ಕೈಗಾರಿಕಾ ಸಂಸ್ಥೆಯನ್ನು ಸ್ಥಾಪಿಸುವ ಮೂಲಕ ಉದ್ಯಮ ರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇವರ ಸಂಸ್ಥೆಯು ತಯಾರಿಸಿದ ಆಟೋಮೊಬೈಲ್ ಬಿಡಿಭಾಗಗಳು ಯುರೋಪ್ ಸೇರಿದಂತೆ ವಿದೇಶಗಳಿಗೆ ರಫ್ತಾಗುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿತ್ತು. ನಂತರ 1979ರಲ್ಲಿ ಕಾರ್ಕಳದ ನಿಟ್ಟೆಯಲ್ಲಿ ವಿದ್ಯಾಸಂಸ್ಥೆಗಳನ್ನು ಆರಂಭಿಸಿದ ಇವರು, ಇಂದು ಮಂಗಳೂರು ಮತ್ತು ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳನ್ನು ಒಳಗೊಂಡ 'ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯ'ವನ್ನು ಕಟ್ಟಿ ಬೆಳೆಸಿದ್ದರು.
ಇಂಜಿನಿಯರಿಂಗ್, ವೈದ್ಯಕೀಯ ಸೇರಿದಂತೆ ಉನ್ನತ ಶಿಕ್ಷಣದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಅನುಪಮ ಕೊಡುಗೆಗಾಗಿ ವಿನಯ ಹೆಗ್ಡೆ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಮತ್ತು ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿತ್ತು. ಸಹಾಯ ಕೇಳಿ ಬಂದವರಿಗೆ ಇಲ್ಲ ಎನ್ನದ ಕೊಡುಗೈ ದಾನಿಯಾಗಿದ್ದ ಇವರು, ಆರೋಗ್ಯ ಕ್ಷೇತ್ರದಲ್ಲಿಯೂ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಮೂಲಕ ಜನಸಾಮಾನ್ಯರಿಗೆ ಕಡಿಮೆ ವೆಚ್ಚದಲ್ಲಿ ಸೇವೆ ನೀಡುವಂತೆ ಮಾಡಿದ್ದರು. ಮೃತರ ಪಾರ್ಥಿವ ಶರೀರವನ್ನು ಇಂದು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಮಂಗಳೂರಿನ ಶಿವಭಾಗ್ ಮತ್ತು ನಿಟ್ಟೆ ಕ್ಯಾಂಪಸ್‌ನಲ್ಲಿ ಇರಿಸಲಾಗಿದ್ದು, ಸಂಜೆ ಕಾರ್ಕಳದ ನಿಟ್ಟೆಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ.





Comments