ನೆರೆಯ ದೇಶಗಳಿಂದ ಅಡಿಕೆ ಆಮದು: ಸಂಸತ್ತಿನಲ್ಲಿ ಗಂಭೀರ ವಿಷಯ ಪ್ರಸ್ತಾಪಿಸಿದ ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ
- sathyapathanewsplu
- Dec 2
- 1 min read

ಸುಂಕಮುಕ್ತ ವ್ಯವಸ್ಥೆಯ ದುರ್ಬಳಕೆಯಿಂದ ದೇಶದ ಅಡಿಕೆ ಬೆಳೆಗಾರರಿಗೆ ಆರ್ಥಿಕ ಸಂಕಷ್ಟ: ಸಂಸದರ ಮನವಿ
ನವದೆಹಲಿ: ಭೂತಾನ್, ಮಯನ್ಮಾರ್ ಮತ್ತು ಶ್ರೀಲಂಕಾದಂತಹ ನೆರೆಯ ದೇಶಗಳಿಂದ ಭಾರೀ ಪ್ರಮಾಣದಲ್ಲಿ ಅಡಿಕೆ ಆಮದು ಆಗುತ್ತಿರುವುದು ದೇಶದ ಅಡಿಕೆ ಬೆಳೆಗಾರರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯ ಚಳಿಗಾಲದ ಅಧಿವೇಶನದ ಮೊದಲ ದಿನವೇ ಪ್ರಸ್ತಾಪಿಸಿ ಸದನದ ಗಮನ ಸೆಳೆದಿದ್ದಾರೆ. ನೆರೆಯ ಸಣ್ಣ ದೇಶಗಳಿಗೆ ವ್ಯಾಪಾರ ಉತ್ತೇಜನ ನೀಡುವ ಸದುದ್ದೇಶದಿಂದ ಜಾರಿಯಲ್ಲಿರುವ ಸುಂಕ ಮುಕ್ತ (Duty-Free Quota-Free - DFQF) ವ್ಯವಸ್ಥೆಯಡಿ ಶೂನ್ಯ ಸುಂಕ ವಿಧಿಸಲಾಗುತ್ತಿದೆ. ಆದರೆ, ಈ ವ್ಯವಸ್ಥೆಯನ್ನು ಈ ದೇಶಗಳು ದುರುಪಯೋಗಪಡಿಸಿಕೊಂಡು, ಕಡಿಮೆ ಬೆಲೆಯ ಕಳಪೆ ಗುಣಮಟ್ಟದ ಅಡಿಕೆಯನ್ನು ಭಾರತಕ್ಕೆ ದೊಡ್ಡ ಪ್ರಮಾಣದಲ್ಲಿ ಆಮದು ಮಾಡುತ್ತಿವೆ. ಇದು ಕರ್ನಾಟಕ ಸೇರಿ ದೇಶದ ಪ್ರಮುಖ ಅಡಿಕೆ ಬೆಳೆಯುವ ಪ್ರದೇಶಗಳಾದ ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯ ರೈತರಿಗೆ ದೊಡ್ಡ ಹೊಡೆತ ನೀಡಿದ್ದು, ಅಡಿಕೆ ದರ ಕುಸಿತಕ್ಕೆ ಕಾರಣವಾಗಿದೆ ಎಂದು ಸಂಸದರು ಆತಂಕ ವ್ಯಕ್ತಪಡಿಸಿದ್ದಾರೆ.
ಭಾರತವು 2023-24ರ ಅವಧಿಯಲ್ಲಿ ಸುಮಾರು 14 ಲಕ್ಷ ಟನ್ ಅಡಿಕೆ ಉತ್ಪಾದನೆಯೊಂದಿಗೆ ಸ್ವಾವಲಂಬಿಯಾಗಿದೆ. ಅದರಲ್ಲಿ ಕರ್ನಾಟಕ ರಾಜ್ಯವೊಂದೇ ಸುಮಾರು 10 ಲಕ್ಷ ಟನ್ ಅಡಿಕೆ ಉತ್ಪಾದಿಸುತ್ತದೆ. ದೇಶದಲ್ಲಿ ಇಷ್ಟೊಂದು ಪ್ರಮಾಣದ ಉತ್ಪಾದನೆಯಿದ್ದರೂ, ನೆರೆಯ ದೇಶಗಳಿಂದ ಕಳಪೆ ಗುಣಮಟ್ಟದ ಅಡಿಕೆಯನ್ನು ಶೂನ್ಯ ಸುಂಕದೊಂದಿಗೆ ಆಮದು ಮಾಡಿಕೊಳ್ಳುವ ಅಗತ್ಯವಿಲ್ಲ. ಈ ಅನಿಯಂತ್ರಿತ ಆಮದು ವ್ಯವಸ್ಥೆಯಿಂದಾಗಿ ದೇಶೀಯ ಅಡಿಕೆ ದರ ಹಾಗೂ ಬೇಡಿಕೆ ಕುಸಿದು, ಅಡಿಕೆ ಬೆಳೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. 2023ರ ಸೆಪ್ಟೆಂಬರ್‌ನಿಂದ 2024ರ ಆಗಸ್ಟ್ ಅವಧಿಯಲ್ಲಿ ಭೂತಾನ್‌ನಿಂದ ಶೇ.57, ಮಾಯನ್ಮಾರ್‌ನಿಂದ ಶೇ.39 ಹಾಗೂ ಶ್ರೀಲಂಕಾದಿಂದ ಶೇ.2ರಷ್ಟು ಕಳಪೆ ಅಡಿಕೆ ಆಮದು ಮಾಡಿಕೊಳ್ಳಲಾಗಿದೆ ಎಂಬ ಅಂಕಿ-ಅಂಶಗಳನ್ನು ಸಂಸದ ಕ್ಯಾ. ಚೌಟ ಸದನದಲ್ಲಿ ಮಂಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ, ಸಂಸದ ಕ್ಯಾ. ಚೌಟ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಅವರಿಗೂ ಮನವಿ ಸಲ್ಲಿಸಿದ್ದಾರೆ. ಅಡಿಕೆ ಆಮದಿನಿಂದ ನಮ್ಮ ರೈತರಿಗೆ ಉಂಟಾಗುತ್ತಿರುವ ದೊಡ್ಡ ಅಪಾಯವನ್ನು ತಡೆಯಲು, ಸುಂಕಮುಕ್ತ ಉತ್ಪನ್ನ ಆಮದು ಪಟ್ಟಿಯಿಂದ ಅಡಿಕೆಯನ್ನು ಹೊರಗಿಡಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಕಡಿಮೆ ಅಭಿವೃದ್ಧಿ ಹೊಂದಿರುವ ನೆರೆ ದೇಶಗಳಿಂದ ಆಮದಾಗುವ ಉತ್ಪನ್ನಗಳಿಗೆ ಶೇ.100ರಷ್ಟು ಮೂಲ ಸುಂಕವನ್ನು ಒಳಗೊಂಡ ಸಾಮಾನ್ಯ ಸುಂಕ ವಿಧಿಸುವ ವ್ಯವಸ್ಥೆಯನ್ನು ಮರುಸ್ಥಾಪಿಸುವಂತೆ ಸಂಸದರು ಆಗ್ರಹಿಸಿದ್ದಾರೆ. ಈ ಮೂಲಕ ದಕ್ಷಿಣ ಕನ್ನಡ ಸೇರಿದಂತೆ ಅಡಿಕೆ ಬೆಳೆಯುವ ಭಾಗದ ಲಕ್ಷಾಂತರ ರೈತರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಅವರು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.






Comments