ಮನೆ ಅಡಿಪಾಯ ಅಗೆಯುವಾಗ ಪತ್ತೆಯಾದ ನಿಧಿ: 1 ಕೆಜಿ ಚಿನ್ನದ ಆಭರಣ ವಶಕ್ಕೆ
- sathyapathanewsplu
- Jan 11
- 1 min read

ಗದಗ: ಜಿಲ್ಲೆಯ ಐತಿಹಾಸಿಕ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಕುಂಡಿ ಗ್ರಾಮದಲ್ಲಿ ಹಳೆಯ ಮನೆಯ ಅಡಿಪಾಯ ಅಗೆಯುವ ಸಂದರ್ಭದಲ್ಲಿ ಅಂದಾಜು ಒಂದು ಕೆಜಿ ತೂಕದ ಪುರಾತನ ಚಿನ್ನಾಭರಣಗಳು ಪತ್ತೆಯಾಗಿವೆ. ಗ್ರಾಮದ 4ನೇ ವಾರ್ಡ್ ನಿವಾಸಿ ಗಂಗವ್ವ ಬಸವರಾಜ ರಿತ್ತಿ ಎಂಬುವವರು ತಮ್ಮ ಹಳೆಯ ಮನೆಯನ್ನು ಕೆಡವಿ ಹೊಸ ಮನೆ ನಿರ್ಮಾಣ ಮಾಡಲು ಗುದ್ದಲಿ ಪೂಜೆ ನೆರವೇರಿಸಿ ಭೂಮಿ ಅಗೆಯುತ್ತಿದ್ದರು. ಈ ವೇಳೆ ಮಣ್ಣಿನೊಳಗೆ ತಾಮ್ರದ ಚೆಂಬೊಂದು ಪತ್ತೆಯಾಗಿದ್ದು, ಅದನ್ನು ತೆರೆದು ನೋಡಿದಾಗ ಒಳಗಿದ್ದ ಚಿನ್ನದ ರಾಶಿಯನ್ನು ಕಂಡು ಮನೆಯವರು ಬೆರಗಾಗಿದ್ದಾರೆ.
ಪತ್ತೆಯಾದ ನಿಧಿಯಲ್ಲಿ ಪ್ರಾಚೀನ ಕಾಲದ ಚಿನ್ನದ ಬಳೆಗಳು, ಸರಗಳು, ಉಂಗುರಗಳು ಸೇರಿದಂತೆ ವಿವಿಧ ಬಗೆಯ ಆಭರಣಗಳಿದ್ದವು. ವಿಷಯ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ನಿಧಿ ನೋಡಲು ನೂರಾರು ಗ್ರಾಮಸ್ಥರು ಸ್ಥಳದಲ್ಲಿ ಜಮಾಯಿಸಿದ್ದರು. ಲಕ್ಕುಂಡಿ ಗ್ರಾಮವು ಕಲ್ಯಾಣ ಚಾಲುಕ್ಯರ ಕಾಲದ ಶ್ರೀಮಂತ ಇತಿಹಾಸವನ್ನು ಹೊಂದಿರುವುದರಿಂದ, ಪತ್ತೆಯಾದ ಈ ಆಭರಣಗಳು ಕೂಡ ಐತಿಹಾಸಿಕ ಮಹತ್ವವನ್ನು ಹೊಂದಿರಬಹುದು ಎಂಬ ಕುತೂಹಲ ಸ್ಥಳೀಯರಲ್ಲಿ ಮೂಡಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್ ಹಾಗೂ ಅಪರ ಜಿಲ್ಲಾಧಿಕಾರಿ ದುರ್ಗೇಶ್ ಸೇರಿದಂತೆ ಪ್ರಮುಖ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸರ್ಕಾರದ ನಿಯಮದಂತೆ ಪತ್ತೆಯಾದ ಎಲ್ಲಾ ಆಭರಣಗಳನ್ನು ಪೊಲೀಸರು ಸದ್ಯ ತಮ್ಮ ವಶಕ್ಕೆ ಪಡೆದಿದ್ದು, ಹೆಚ್ಚಿನ ತಪಾಸಣೆಗಾಗಿ ಜಿಲ್ಲಾ ಖಜಾನೆಗೆ ರವಾನಿಸಲಾಗಿದೆ. ಈ ಆಭರಣಗಳು ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲು ಪುರಾತತ್ವ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಶೀಘ್ರವೇ ಸ್ಥಳಕ್ಕೆ ಆಗಮಿಸಲಿದ್ದಾರೆ ಎಂದು ತಿಳಿದುಬಂದಿದೆ.





Comments