ಮಂಗಳೂರು: ನಕಲಿ ಚಿನ್ನದ ಬಳೆ ಅಡವಿಟ್ಟು ₹14.89 ಲಕ್ಷ ಸಾಲ – ಮೂವರ ಬಂಧನ
- sathyapathanewsplu
- 5 days ago
- 1 min read

ಕಾವೂರು ವ್ಯಾಪ್ತಿಯ ಸಹಕಾರಿ ಸಂಸ್ಥೆಯೊಂದರಲ್ಲಿ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ₹14.89 ಲಕ್ಷ ಸಾಲ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾವೂರು ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ನಝೀರ್, ಜಮಾಲುದ್ದೀನ್ ಎ.ಎಚ್. ಹಾಗೂ ಸೈನಾಝ್ ಎಂದು ಗುರುತಿಸಲಾಗಿದೆ. ಪ್ರಕರಣದ ಮತ್ತೊಬ್ಬ ಆರೋಪಿ ದಿಲ್‌ಶಾದ್ ತಲೆಮರೆಸಿಕೊಂಡಿದ್ದು, ಆಕೆಯ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದಾರೆ.
ಬಂಧಿತರು ಹಾಗೂ ತಲೆಮರೆಸಿಕೊಂಡಿರುವ ಆರೋಪಿ 2024ರ ಜೂನ್ 24ರಿಂದ ಅಕ್ಟೋಬರ್ 5ರವರೆಗೆ ನಕಲಿ ಚಿನ್ನದ ಬಳೆಗಳನ್ನು ಅಡವಿಟ್ಟು ಸಾಲ ಪಡೆದಿದ್ದರು. ಬ್ಯಾಂಕ್‌ನ ಚಿನ್ನಾಭರಣ ಪರೀಕ್ಷಕರು ಅಸಲಿ ಎಂದು ದೃಢೀಕರಿಸಿದ ವರದಿಯ ಆಧಾರದ ಮೇಲೆ ಸಹಕಾರಿ ಸಂಸ್ಥೆ ಸಾಲ ಮಂಜೂರು ಮಾಡಿತ್ತು.
ಆದರೆ 2025ರ ಜುಲೈ 7ರಂದು ವಾರ್ಷಿಕ ಮರುಪರೀಕ್ಷೆ ನಡೆಸಿದಾಗ, ಅಡವಿಟ್ಟ ಎಲ್ಲಾ ಚಿನ್ನದ ಬಳೆಗಳು ನಕಲಿ ಎಂಬುದು ಪತ್ತೆಯಾಗಿದೆ. ಈ ಕುರಿತು ಆರೋಪಿಗಳನ್ನು ವಿಚಾರಿಸಿದಾಗ ಹಣ ಪಾವತಿಸುವುದಾಗಿ ಭರವಸೆ ನೀಡಿದರೂ, ಇದುವರೆಗೆ ಯಾವುದೇ ಮೊತ್ತವನ್ನು ಕಟ್ಟಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆರೋಪಿಗಳು ಪೂರ್ವನಿಯೋಜಿತವಾಗಿ ಜಾಲ ರಚಿಸಿ ಸಹಕಾರಿ ಸಂಸ್ಥೆಗೆ ಮೋಸ ಮಾಡುವ ಉದ್ದೇಶ ಹೊಂದಿದ್ದರು ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಸಂಘದ ಮ್ಯಾನೇಜರ್ ನೀಡಿದ ದೂರಿನ ಆಧಾರದಲ್ಲಿ ಕಾವೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.






Comments