ಕೇರಳದಲ್ಲಿ ಭೀಕರ ಕಾರು ಅಪಘಾತ: ಸುರತ್ಕಲ್ ಮೂಲದ ಯುವಕ ಸಾವು, ನಾಲ್ವರಿಗೆ ಗಾಯ
- sathyapathanewsplu
- 16 hours ago
- 1 min read

ಮಂಗಳೂರು: ಕೇರಳದ ಕೊಟ್ಟಾಯಂನಲ್ಲಿ ಬುಧವಾರ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮಂಗಳೂರಿನ ಸುರತ್ಕಲ್ ಸಮೀಪದ ಕಾನಾ ನಿವಾಸಿ ಶಾನವಾಜ್ ಅಲಿಯಾಸ್ ಶಮೀಮ್ (26) ಎಂಬ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂಲತಃ ಮುಲ್ಕಿ ತಾಲ್ಲೂಕಿನ ಅಂಗರಗುಡ್ಡೆ ನಿವಾಸಿಯಾಗಿದ್ದ ಶಮೀಮ್, ಪ್ರಸ್ತುತ ಕಾನಾದ ಚಿರಾಗ್ ಫ್ಲಾಟ್ಸ್‌ನಲ್ಲಿ ವಾಸವಿದ್ದರು. ಈ ಘಟನೆಯಲ್ಲಿ ಕಾರಿನಲ್ಲಿದ್ದ ಇತರ ನಾಲ್ವರು ಗಾಯಗೊಂಡಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಮೃತ ಶಮೀಮ್ ಮತ್ತು ಅವರ ಸ್ನೇಹಿತರು ಕೊಟ್ಟಾಯಂನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದಕ್ಕೆ ಬೌನ್ಸರ್‌ಗಳಾಗಿ ತೆರಳಿದ್ದರು. ಬುಧವಾರ ಬೆಳಿಗ್ಗೆ ಉಪಾಹಾರ ಸೇವಿಸಲು ಪಟ್ಟಣಕ್ಕೆ ಕಾರಿನಲ್ಲಿ ಹೋಗುತ್ತಿದ್ದಾಗ, ಕಿರಿದಾದ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಸುಮಾರು 20 ಅಡಿ ಆಳದ ಕಂದಕಕ್ಕೆ ಉರುಳಿದೆ. ಅಪಘಾತದ ತೀವ್ರತೆಗೆ ಶಮೀಮ್ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗಾಯಾಳುಗಳಲ್ಲಿ ಕಾಟಿಪಳ್ಳದ ಸಿರಾಜ್ ಎಂಬುವವರ ಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದಂತೆ ಕಾನಾದ ಅಶ್ಫಾಕ್ ಮತ್ತು ಸೂರಿಂಜೆಯ ಶಬ್ಬೀರ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ರಾಜಸ್ಥಾನ ಮೂಲದ ಕಾರು ಚಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವರದಿಯಾಗಿದೆ.






Comments