ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮೈಸೂರು ಸಂಸದ ಯದುವೀರ್ ಒಡೆಯರ್ ಭಕ್ತಿಪೂರ್ವಕ ದರ್ಶನ
- sathyapathanewsplu
- 15 hours ago
- 1 min read

ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಾರಾಧನೆಯ ಪುಣ್ಯಕ್ಷೇತ್ರವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರು ಲೋಕಸಭಾ ಕ್ಷೇತ್ರದ ಸಂಸದರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನವರಿ 27ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಸುಬ್ರಹ್ಮಣ್ಯದ ಮಠದಲ್ಲಿ ಆಯೋಜಿಸಲಾಗಿದ್ದ 'ರಾಷ್ಟ್ರೀಯ ವಿದ್ವತ್ ಸಮ್ಮೇಳನ – ವಿಶ್ವ ಸಂಭ್ರಮ' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು, ಈ ಸಂದರ್ಭದಲ್ಲಿ ಕ್ಷೇತ್ರದ ಅಧಿದೇವತೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ ಕೃತಾರ್ಥರಾದರು.
ದೇವಳಕ್ಕೆ ಆಗಮಿಸಿದ ಸಂಸದರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಅವರು ಪೂರ್ಣಕುಂಭ ಸ್ವಾಗತದೊಂದಿಗೆ ಭವ್ಯವಾಗಿ ಬರಮಾಡಿಕೊಂಡರು. ಶಾಸ್ತೋಕ್ತವಾಗಿ ನಡೆದ ಸ್ವಾಗತ ಪ್ರಕ್ರಿಯೆಯ ನಂತರ, ಪಾರಂಪರಿಕ ಉಡುಗೆಯಲ್ಲಿ ಸರಳವಾಗಿ ದೇವಸ್ಥಾನ ಪ್ರವೇಶಿಸಿದ ಯದುವೀರ್ ಅವರು ಗರ್ಭಗುಡಿಯಲ್ಲಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ರಾಜವಂಶಸ್ಥರ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ವತಿಯಿಂದ ಕಟ್ಟುನಿಟ್ಟಿನ ಶಿಷ್ಟಾಚಾರ ಹಾಗೂ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು.
ಈ ಸಂದರ್ಭದಲ್ಲಿ ದೇವಸ್ಥಾನದ ಶಿಷ್ಟಾಚಾರ ವಿಭಾಗದ ಪ್ರಮುಖರಾದ ಜಯರಾಮ ರಾವ್, ಪ್ರಮೋದ್, ಗೋಪಿನಾಥ್ ಸೇರಿದಂತೆ ದೇವಳದ ಇತರೆ ಸಿಬ್ಬಂದಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಅತ್ಯಂತ ಸರಳತೆಯಿಂದ ಭಕ್ತರೊಂದಿಗೆ ಬೆರೆತ ಸಂಸದರ ನಡೆ ಸಾರ್ವಜನಿಕರ ಗಮನ ಸೆಳೆಯಿತು. ವಿಶ್ವಪ್ರಸಿದ್ಧ ಕುಕ್ಕೆ ಕ್ಷೇತ್ರದಲ್ಲಿ ನಡೆದ ಈ ವಿದ್ವತ್ ಸಮ್ಮೇಳನ ಹಾಗೂ ಸಂಸದರ ಭೇಟಿಯು ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೆಚ್ಚಿಸಿತು.






Comments