ಮಂಗಳೂರು: ಲಕ್ಕಿ ಸ್ಕೀಮ್ ಹೆಸರಲ್ಲಿ ಸಾವಿರಾರು ಕೋಟಿ ವಂಚನೆ; ಕಂಪನಿಗಳಿಗೆ ಬೀಗ ಜಡಿಯಲು ಡಿವೈಎಫ್‌ಐ ಆಗ್ರಹ
- sathyapathanewsplu
- Jan 15
- 1 min read

ಮಂಗಳೂರು: ಕಾರು, ಬಂಗಾರ ಹಾಗೂ ಐಷಾರಾಮಿ ಮನೆಗಳ ಆಮಿಷ ಒಡ್ಡಿ ಸಾರ್ವಜನಿಕರಿಂದ ಸಾವಿರಾರು ಕೋಟಿ ರೂಪಾಯಿ ಹಣ ಸಂಗ್ರಹಿಸಿ ವಂಚಿಸುತ್ತಿರುವ 'ಲಕ್ಕಿ ಸ್ಕೀಮ್' ಕಂಪನಿಗಳ ವಿರುದ್ಧ ಮಂಗಳೂರಿನ ಕ್ಲಾಕ್ ಟವರ್ ಬಳಿ ಬೃಹತ್ ಪ್ರತಿಭಟನೆ ನಡೆಯಿತು. ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ಜಿಲ್ಲಾಧ್ಯಕ್ಷ ಬಿ.ಕೆ. ಇಮ್ಮಿಯಾಝ್ ಅವರು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಯಾವುದೇ ಮಾರ್ಗಸೂಚಿಗಳನ್ನು ಪಾಲಿಸದೆ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಅಕ್ರಮ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇಂತಹ 'ಬ್ಲಡ್ ಕಂಪನಿಗಳಿಗೆ' ಕೂಡಲೇ ಬೀಗ ಜಡಿದು, ವಂಚಕ ಜಾಲದ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವಂಚನಾ ಜಾಲವು ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಇತರೆ ಜಿಲ್ಲೆಗಳಿಗೂ ವಿಸ್ತರಣೆಯಾಗಿದ್ದು, ಬಡವರ ಪ್ರಾಮಾಣಿಕತೆಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಕಿಡಿಕಾರಿದರು. ಮಕ್ಕಳ ವಿದ್ಯಾಭ್ಯಾಸ ಹಾಗೂ ಹೆಣ್ಣು ಮಕ್ಕಳ ಮದುವೆಗಾಗಿ ಕೂಡಿಟ್ಟ ಹಣವನ್ನು ನಂಬಿಕೆಯಿಂದ ಹೂಡಿಕೆ ಮಾಡಿದ್ದ ಬಡ ಕುಟುಂಬಗಳು ಇಂದು ಬೀದಿಗೆ ಬಿದ್ದಿವೆ. ಪೊಲೀಸರು ಮತ್ತು ಲೀಡ್ ಬ್ಯಾಂಕ್ ಅಧಿಕಾರಿಗಳು ಆರಂಭದಲ್ಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡಿದ್ದರೆ ಇಷ್ಟು ದೊಡ್ಡ ಮಟ್ಟದ ಹಗರಣ ನಡೆಯುತ್ತಿರಲಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸಂತ್ರಸ್ತರ ವೇದಿಕೆಯ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಸಂತ್ರಸ್ತರು ಭಾಗವಹಿಸಿ ತಮಗಾದ ಅನ್ಯಾಯದ ವಿರುದ್ಧ ಧ್ವನಿ ಎತ್ತಿದರು. ಡಿವೈಎಫ್‌ಐ ಮತ್ತು ಸಿಐಟಿಯು ಮುಖಂಡರಾದ ತಯ್ಯುಬ್ ಬೆಂಗ್ರೆ, ಯೋಗೀಶ್ ಜಪ್ಪಿನಮೊಗರು ಸೇರಿದಂತೆ ಹಲವು ಗಣ್ಯರು ಹೂಡಿಕೆದಾರರ ಹಿತರಕ್ಷಣೆ ಮಾಡುವಂತೆ ಆಗ್ರಹಿಸಿದರು. ಪ್ರತಿಭಟನೆಯಲ್ಲಿ ವಿವಿಧ ಜಿಲ್ಲೆಗಳ ಪ್ರಮುಖರಾದ ಪರ್ವೀಝ್ ಬಂದರ್, ಖಲೀಲ್ ಬೆಂಗ್ರೆ ಮತ್ತು ಸಮದ್ ಕಾಟಿಪಳ್ಳ ಸೇರಿದಂತೆ ಅನೇಕರು ಪಾಲ್ಗೊಂಡು, ವಂಚನೆಗೊಳಗಾದ ಹಣವನ್ನು ವಾಪಸ್ ಕೊಡಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಎಚ್ಚರಿಸಿದರು.





Comments