ಮಲಯಾಳಿ ಭಾಷಾ ಮಸೂದೆ ಕೈಬಿಡಿ: ಕೇರಳ ಸಿಎಂಗೆ ಸಿದ್ದರಾಮಯ್ಯ ಪತ್ರ
- sathyapathanewsplu
- Jan 9
- 1 min read

ಕೇರಳ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ‘ಮಲಯಾಳಿ ಭಾಷಾ ಮಸೂದೆ–2025’ ಕಾಸರಗೋಡಿನ ಕನ್ನಡಿಗರ ಭಾಷಾ ಹಕ್ಕುಗಳನ್ನು ಕಸಿದುಕೊಳ್ಳುವಂತಿದೆ ಎಂದು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಸೂದೆಯನ್ನು ತಕ್ಷಣವೇ ಹಿಂಪಡೆಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಿಗೆ ಆಗ್ರಹಿಸಿರುವ ಅವರು, ಕನ್ನಡ ಮಾಧ್ಯಮ ಶಾಲೆಗಳಲ್ಲಿ ಮಲಯಾಳಂ ಕಲಿಕೆಯನ್ನು ಕಡ್ಡಾಯಗೊಳಿಸುವುದು ಸಂವಿಧಾನವು ಭಾಷಾ ಅಲ್ಪಸಂಖ್ಯಾತರಿಗೆ ನೀಡಿರುವ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಆಡಳಿತಾತ್ಮಕವಾಗಿ ಕಾಸರಗೋಡು ಕೇರಳದ ಭಾಗವಾಗಿದ್ದರೂ, ಅಲ್ಲಿನ ಜನರು ಭಾವನಾತ್ಮಕವಾಗಿ ಕರ್ನಾಟಕದೊಂದಿಗೆ ಬೆಸೆದುಕೊಂಡಿದ್ದಾರೆ. ಅಲ್ಲಿನ ಕನ್ನಡಿಗರ ಹಿತರಕ್ಷಣೆ ಮಾಡುವುದು ಕರ್ನಾಟಕ ಸರ್ಕಾರದ ಕರ್ತವ್ಯವಾಗಿದೆ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ. ಸಂವಿಧಾನದ 29, 30 ಮತ್ತು 350(ಎ) ವಿಧಿಗಳ ಅನ್ವಯ ಮಾತೃಭಾಷೆಯಲ್ಲಿ ಶಿಕ್ಷಣ ಪಡೆಯುವುದು ಪ್ರತಿಯೊಬ್ಬರ ಹಕ್ಕು. ಈ ಬಹುತ್ವದ ಅಸ್ಮಿತೆಗೆ ಧಕ್ಕೆ ತರುವುದು ಅಪಾಯಕಾರಿ ಬೆಳವಣಿಗೆಯಾಗಿದ್ದು, ಒಂದು ಭಾಷೆಯನ್ನು ಮತ್ತೊಂದು ಭಾಷೆಯ ಮೇಲೆ ಹೇರುವುದು ಸರಿಯಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಈ ಕುರಿತು ಸುದೀರ್ಘ ಸಂದೇಶ ನೀಡಿರುವ ಮುಖ್ಯಮಂತ್ರಿಗಳು, ಕಾಸರಗೋಡು ಕನ್ನಡಿಗರ ಭಾಷಾ ಸ್ವಾತಂತ್ರ್ಯ ಮತ್ತು ಹಕ್ಕುಗಳ ರಕ್ಷಣೆಗೆ ಕರ್ನಾಟಕ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಭರವಸೆ ನೀಡಿದ್ದಾರೆ. ಕೇರಳ ಸರ್ಕಾರ ಒಂದು ವೇಳೆ ಈ ಮಸೂದೆಯನ್ನು ಜಾರಿಗೊಳಿಸಲು ಮುಂದಾದರೆ, ಕರ್ನಾಟಕ ಸರ್ಕಾರವು ಕಾಸರಗೋಡಿನ ಕನ್ನಡಿಗರ ಪರವಾಗಿ ಗಟ್ಟಿಯಾಗಿ ನಿಲ್ಲಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.





Comments