ಕಡಬ: ಅಕ್ರಮ ಮರ ಸಾಗಾಟ ಪತ್ತೆ; ಎಂಟು ಲಕ್ಷ ಮೌಲ್ಯದ ಸೊತ್ತು ವಶ
- sathyapathanewsplu
- Jan 10
- 1 min read

ಕಡಬ: ತಾಲೂಕಿನ ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಕಲೇಶಪುರದಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಮರದ ದಿಮ್ಮಿಗಳನ್ನು ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ. ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳ ತಂಡವು ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಮರಗಳನ್ನು ಹಾಗೂ ಸಾಗಾಟಕ್ಕೆ ಬಳಸಿದ ವಾಹನವನ್ನು ಜಪ್ತಿ ಮಾಡಿ ಪ್ರಕರಣ ದಾಖಲಿಸಿಕೊಂಡಿದೆ.
ಅರಣ್ಯ ಇಲಾಖೆಯ ಈ ಯಶಸ್ವಿ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯ ಅಧಿಕಾರಿಗಳಾದ ವಿನಯ್ ಕುಮಾರ್ ಮತ್ತು ಪ್ರವೀಣ್ ಪಿ, ಗಸ್ತು ಅರಣ್ಯ ಪಾಲಕರಾದ ವಿನಯ ಚಂದ್ರ ಹಾಗೂ ಶಿವಾನಂದ ಕುದುರಿ ಮತ್ತು ಇತರ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ವಶಪಡಿಸಿಕೊಳ್ಳಲಾದ ಮರದ ದಿಮ್ಮಿಗಳು ಹಾಗೂ ವಾಹನದ ಒಟ್ಟು ಮೌಲ್ಯವು ಸುಮಾರು ಏಳರಿಂದ ಎಂಟು ಲಕ್ಷ ರೂಪಾಯಿಗಳೆಂದು ಅಂದಾಜಿಸಲಾಗಿದೆ.
ಪ್ರಕರಣದ ಮುಂದಿನ ತನಿಖೆಯನ್ನು ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್. ಮರಿಯಪ್ಪ ಅವರ ಮಾರ್ಗದರ್ಶನದಲ್ಲಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುಬ್ಬಯ್ಯ ನಾಯಕ್ ಅವರ ನಿರ್ದೇಶನದಂತೆ ವಲಯ ಅಧಿಕಾರಿ ರಾಘವೇಂದ್ರ ಹೆಚ್. ಪಿ ಅವರು ನಡೆಸಲಿದ್ದಾರೆ. ಅಕ್ರಮ ಚಟುವಟಿಕೆಗಳ ವಿರುದ್ಧ ಇಲಾಖೆಯು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.





Comments