ಹದಗೆಟ್ಟ ಕಡಬ ಜೂನಿಯರ್ ಕಾಲೇಜು ರಸ್ತೆ, ದುರಸ್ತಿಗೆ ಆಗ್ರಹ.
- sathyapathanewsplu
- Jan 6
- 1 min read

ಕಡಬ ಪಟ್ಟಣದ ಪ್ರಮುಖ ಕೇಂದ್ರ ಬಿಂದುವಾದ ತಾಲೂಕು ಕಚೇರಿಯಿಂದ ಜೂನಿಯರ್ ಕಾಲೇಜಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಹದಗೆಟ್ಟಿದ್ದು, ಸಾರ್ವಜನಿಕರ ಸಂಚಾರಕ್ಕೆ ದುಸ್ಥಿತಿಯಲಿದೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಗಾಲದಲ್ಲಿ ಈ ಗುಂಡಿಗಳಲ್ಲಿ ನೀರು ತುಂಬಿ ಕೆರೆಯಂತಾಗುತ್ತಿದ್ದು, ರಸ್ತೆಯ ಆಳ ತಿಳಿಯದೆ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡಿರುವ ನಿದರ್ಶನಗಳೂ ಇವೆ.
ಈ ರಸ್ತೆಯು ದೈನಂದಿನ ನೂರಾರು ವಿದ್ಯಾರ್ಥಿಗಳು, ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರು ಹಾಗೂ ಆಸ್ಪತ್ರೆಗೆ ತೆರಳುವವರಿಗೆ ಮುಖ್ಯ ಸಂಪರ್ಕ ಸೇತುವೆಯಾಗಿದೆ. ಆದರೆ ರಸ್ತೆ ಅವ್ಯವಸ್ಥೆಯಿಂದಾಗಿ ಆಟೋ ರಿಕ್ಷಾ ಮತ್ತು ಕಾರು ಚಾಲಕರು ಈ ಭಾಗಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ವಾಹನಗಳು ಗುಂಡಿಗೆ ಬಿದ್ದು ಪದೇ ಪದೇ ದುರಸ್ತಿಗೆ ಬರುತ್ತಿರುವುದರಿಂದ ಮಾಲೀಕರು ಆರ್ಥಿಕ ನಷ್ಟ ಅನುಭವಿಸುವಂತಾಗಿದೆ. ಪಾದಚಾರಿಗಳಿಗೂ ಕೂಡ ಈ ರಸ್ತೆಯಲ್ಲಿ ನಡೆದಾಡುವುದು ಹರಸಾಹಸದ ಕೆಲಸವಾಗಿದೆ.
ಸ್ಥಳೀಯ ನಿವಾಸಿಗಳು ಮತ್ತು ವಾಹನ ಸವಾರರು ರಸ್ತೆ ದುರಸ್ತಿಗೆ ಸಂಬಂಧಿಸಿದಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಇನ್ನಾದರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಎಚ್ಚೆತ್ತುಕೊಂಡು, ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಈ ರಸ್ತೆಯನ್ನು ಶೀಘ್ರವಾಗಿ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





Comments