ತಂದೆಗೆ ಚೂರಿ ಇರಿದು, ಬಳಿಕ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ: ಕಡಬದಲ್ಲಿ ಭೀಕರ ಘಟನೆ
- sathyapathanewsplu
- 5 days ago
- 1 min read

ಕಡಬ:
ತಂದೆಯನ್ನೇ ಚೂರಿಯಿಂದ ಇರಿದು ಕೊಲೆ ಯತ್ನ ನಡೆಸಿದ ಬಳಿಕ ಮನೆಯಲ್ಲಿದ್ದ ಕೋವಿಯಿಂದ ಶೂಟೌಟ್ ಮಾಡಿಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಶನಿವಾರ ಸಂಜೆ ಕಡಬ ಠಾಣಾ ವ್ಯಾಪ್ತಿಯ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ನಡೆದಿದೆ.
ಶೂಟೌಟ್ ಮಾಡಿಕೊಂಡು ಮೃತಪಟ್ಟ ಯುವಕನನ್ನು ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಎಂಬವರ ಪುತ್ರ ಮೋಕ್ಷ ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ತಂದೆ–ಮಗನ ನಡುವೆ ತೀವ್ರ ಜಗಳ ನಡೆದಿದ್ದು, ಆ ಸಂದರ್ಭದಲ್ಲಿ ಮೋಕ್ಷ ತನ್ನ ತಂದೆ ವಸಂತ ಅಮೀನ್ ಅವರಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ ಎನ್ನಲಾಗಿದೆ.
ಅನಂತರ ಮನೆಗೆಲ್ಲಿದ್ದ ಕೋವಿಯನ್ನು ತೆಗೆದುಕೊಂಡ ಮೋಕ್ಷ ಶೂಟೌಟ್ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡಿರುವ ವಸಂತ ಅಮೀನ್ ಅವರನ್ನು ತಕ್ಷಣ ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
ಕೇರಳ ಮೂಲದವರಾಗಿರುವ ವಸಂತ ಅಮೀನ್ ಅವರು ರಾಮಕುಂಜ ಪಾದೆ ಪ್ರದೇಶದಲ್ಲಿ ಜಾಗ ಖರೀದಿಸಿ ಮನೆ ನಿರ್ಮಿಸಿ ತಂದೆ ಹಾಗೂ ಮಗನೊಂದಿಗೆ ವಾಸವಾಗಿದ್ದರು. ಮೃತ ಮೋಕ್ಷ ಮಂಗಳೂರು ಖಾಸಗಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ. ಈ ಕೃತ್ಯಕ್ಕೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಘಟನಾ ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ತನಿಖೆ ಮುಂದುವರಿದಿದೆ.






Comments