ಬೆಂಗಳೂರು: ಬಿಎಂಟಿಸಿ ಬಸ್ಸಿಗೆ ರೈಲು ಡಿಕ್ಕಿ;
- sathyapathanewsplu
- 2 days ago
- 1 min read

ಬೆಂಗಳೂರು: ನಗರದ ಕಾಡುಗೋಡಿಯ ಸಾದರಮಂಗಲ ರೈಲ್ವೆ ಕ್ರಾಸಿಂಗ್ ಬಳಿ ಬಿಎಂಟಿಸಿ ಬಸ್ ಮತ್ತು ರೈಲಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಾದರಮಂಗಲದಲ್ಲಿ ಪ್ರಯಾಣಿಕರನ್ನು ಇಳಿಸಿ ಖಾಲಿ ಬಸ್ಸು ಡಿಪೋಗೆ ಹಿಂತಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅದೃಷ್ಟವಶಾತ್ ಬಸ್ಸಿನಲ್ಲಿ ಪ್ರಯಾಣಿಕರು ಯಾರೂ ಇಲ್ಲದ ಕಾರಣ ಯಾವುದೇ ಜೀವಹಾನಿ ಸಂಭವಿಸಿಲ್ಲ. ಆದರೆ ರೈಲಿನ ಡಿಕ್ಕಿಯ ರಭಸಕ್ಕೆ ಬಿಎಂಟಿಸಿ ಬಸ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಡಿಪೋ ಸಂಖ್ಯೆ 51ಕ್ಕೆ ಸೇರಿದ್ದ ಈ ಬಸ್ಸು, ಇಕ್ಕಟ್ಟಾದ ರಸ್ತೆಯಲ್ಲಿ ಹಿಂಬದಿಗೆ ಚಲಿಸಿ ನಂತರ ಮುಂದಕ್ಕೆ ಹೋಗಲು ಪ್ರಯತ್ನಿಸುತ್ತಿತ್ತು. ಈ ಸಂದರ್ಭದಲ್ಲಿ ಚಾಲಕನು ಹಳಿಗಳ ಮೇಲೆ ರೈಲು ಬರುತ್ತಿರುವುದನ್ನು ಗಮನಿಸದೆ ಮುನ್ನುಗ್ಗಿದ್ದೇ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ. ಟಾಟಾ ನಗರಕ್ಕೆ ತೆರಳುತ್ತಿದ್ದ ಪ್ರಯಾಣಿಕರ ರೈಲು ಹಳಿಗಳ ಮೇಲೆ ನಿಂತಿದ್ದ ಬಸ್ಸಿನ ಮುಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ರೈಲು ಬರುತ್ತಿರುವುದನ್ನು ಕಂಡ ಬಸ್ ಚಾಲಕ ಸಮಯಪ್ರಜ್ಞೆಯಿಂದ ಕೆಳಗಿಳಿದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನೆ ನಡೆದ ತಕ್ಷಣ ಸ್ಥಳಕ್ಕೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಪಘಾತದಿಂದಾಗಿ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು. ರೈಲ್ವೆ ಕ್ರಾಸಿಂಗ್‌ಗಳಲ್ಲಿ ಚಾಲಕರ ನಿರ್ಲಕ್ಷ್ಯದ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಕ್ರೇನ್ ಮೂಲಕ ನಜ್ಜುಗುಜ್ಜಾದ ಬಸ್ಸನ್ನು ಹಳಿಗಳಿಂದ ತೆರವುಗೊಳಿಸಲಾಗಿದೆ. ಈ ಕುರಿತು ಕಾಡುಗೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.






Comments