ಬೀದಿನಾಯಿ ಕಡಿತಕ್ಕೆ ಸರ್ಕಾರವೇ ಹೊಣೆ: ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸುಪ್ರೀಂಕೋರ್ಟ್ ಸೂಚನೆ
- sathyapathanewsplu
- Jan 13
- 1 min read

ಬೀದಿನಾಯಿಗಳ ಹಾವಳಿಯಿಂದ ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಹಾಗೂ ಗಾಯಗೊಂಡವರಿಗೆ ಸರ್ಕಾರವೇ ಪರಿಹಾರ ನೀಡಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಈ ಕುರಿತು ವಿಚಾರಣೆ ನಡೆಸುತ್ತಾ, "ಬೀದಿನಾಯಿಗಳಿಂದಾಗಿ ಅಮಾಯಕ ಮಕ್ಕಳು ಮತ್ತು ವೃದ್ಧರು ಸಾವನ್ನಪ್ಪಿದರೆ ಅಥವಾ ಗಾಯಗೊಂಡರೆ ಅದಕ್ಕೆ ಯಾರು ಹೊಣೆ?" ಎಂದು ಕಳವಳ ವ್ಯಕ್ತಪಡಿಸಿದೆ. ಕೇವಲ ಪ್ರಾಣಿಗಳ ಮೇಲೆ ಕನಿಕರ ತೋರಿಸಿದರೆ ಸಾಲದು, ಮಾನವನ ಮೇಲಿನ ದಾಳಿಗಳ ಬಗ್ಗೆಯೂ ಗಂಭೀರವಾಗಿ ಯೋಚಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.
ಇತ್ತೀಚೆಗೆ ಒಂಬತ್ತು ವರ್ಷದ ಮಗುವೊಂದು ಬೀದಿನಾಯಿ ದಾಳಿಗೆ ಬಲಿಯಾದ ಘಟನೆಯನ್ನು ಪ್ರಸ್ತಾಪಿಸಿದ ನ್ಯಾಯಾಲಯವು, ಇಂತಹ ಘಟನೆಗಳ ಬಗ್ಗೆ ಕಣ್ಣುಮುಚ್ಚಿ ಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದೆ. ನಾಯಿಗಳ ಮೇಲಿನ ಪ್ರೀತಿಯಿಂದ ಅವುಗಳನ್ನು ಪೋಷಿಸುವ ಸಂಘಟನೆಗಳು ಅಥವಾ ವ್ಯಕ್ತಿಗಳು ಆ ನಾಯಿಗಳಿಂದ ತೊಂದರೆಯಾದಾಗ ಜವಾಬ್ದಾರಿಯನ್ನು ಹೊರಬೇಕಾಗುತ್ತದೆ. ನಾಯಿ ಕಡಿತದಿಂದ ಉಂಟಾಗುವ ಸಾವು ಮತ್ತು ಗಾಯಗಳಿಗೆ ರಾಜ್ಯ ಸರ್ಕಾರವೇ ಪರಿಹಾರ ನೀಡಬೇಕು ಮತ್ತು ನಾಯಿ ಪ್ರೇಮಿ ಸಂಘಟನೆಗಳ ಮೇಲೆಯೂ ಹೊಣೆಗಾರಿಕೆ ನಿಗದಿಪಡಿಸುವ ಕಠಿಣ ಚೌಕಟ್ಟನ್ನು ರೂಪಿಸಲಾಗುವುದು ಎಂದು ಪೀಠವು ಸ್ಪಷ್ಟಪಡಿಸಿದೆ.
ನಾಯಿಗಳಿಗೆ ಆಹಾರ ನೀಡುವ ಮತ್ತು ಅವುಗಳ ಆರೈಕೆ ಮಾಡುವ ಹವ್ಯಾಸವಿರುವವರಿಗೆ ಸುಪ್ರೀಂಕೋರ್ಟ್ ಕಿವಿಮಾತು ಹೇಳಿದೆ. ಜನರು ನಾಯಿಗಳನ್ನು ಸಾಕಲು ಅಥವಾ ಆಹಾರ ನೀಡಲು ಬಯಸಿದರೆ, ಅದನ್ನು ತಮ್ಮ ಸ್ವಂತ ಆವರಣದಲ್ಲಿ ಅಥವಾ ಮನೆಯ ಒಳಗೆ ಮಾಡಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗುವಂತೆ ಆಹಾರ ನೀಡುವುದನ್ನು ನ್ಯಾಯಾಲಯ ಪ್ರಶ್ನಿಸಿದೆ. ಬೀದಿನಾಯಿಗಳ ಹಾವಳಿಯನ್ನು ತಡೆಗಟ್ಟಲು ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡಲು ಸರ್ಕಾರವು ಸೂಕ್ತ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ ಎಂದು ಪೀಠವು ಅಭಿಪ್ರಾಯಪಟ್ಟಿದೆ.





Comments