ಬಾಡಿಗೆ ನೆಪದಲ್ಲಿ ಕರೆದೊಯ್ದು ಆಟೋ ಚಾಲಕನ ಹತ್ಯೆ: ಇಬ್ಬರು ಆರೋಪಿಗಳ ಬಂಧನ
- sathyapathanewsplu
- Jan 2
- 1 min read

ಸುಳ್ಯ: ಕಾರು ಬಾಡಿಗೆಗೆ ಬೇಕೆಂದು ನಂಬಿಸಿ ಆಟೋ ಚಾಲಕ ಅಬ್ದುಲ್ ಜಬ್ಬಾರ್ ಅವರನ್ನು ಕರೆದೊಯ್ದು, ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದಡಿ ಸುಳ್ಯ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಸುಳ್ಯ ಕಸಬದ ನಿವಾಸಿ ಮೊಹಮ್ಮದ್ ರಫೀಕ್ (41) ಮತ್ತು ಸಂಪಾಜೆಯ ಮನೋಹರ್ ಕೆ.ಎಸ್. ಅಲಿಯಾಸ್ ಮನು (42) ಎಂದು ಗುರುತಿಸಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ ನಡೆದಿದ್ದ ಈ ಘಟನೆಗೆ ಸಂಬಂಧಿಸಿದಂತೆ ವೈದ್ಯಕೀಯ ವರದಿಯು ಹಲ್ಲೆಯಿಂದಲೇ ಸಾವು ಸಂಭವಿಸಿದೆ ಎಂದು ದೃಢಪಡಿಸಿದ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಘಟನೆಯ ವಿವರದಂತೆ, ಅಕ್ಟೋಬರ್ 16ರಂದು ಆರೋಪಿಗಳು ಬಾಡಿಗೆ ನೆಪದಲ್ಲಿ ಜಬ್ಬಾರ್ ಅವರನ್ನು ದುಗ್ಗಲಡ್ಕಕ್ಕೆ ಕರೆದೊಯ್ದು ಕಿರುಕುಳ ನೀಡಿದ್ದರು. ಬಳಿಕ ಕಲ್ಲುಗುಂಡಿಗೆ ಕರೆತಂದು ಮನಬಂದಂತೆ ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿ ಮನೆಗೆ ಕಳುಹಿಸಿದ್ದರು. ಮರುದಿನ ಜಬ್ಬಾರ್ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಮೃತರ ಪತ್ನಿ ಸುಮಯ್ಯಾ ನೀಡಿದ ದೂರಿನ ಮೇರೆಗೆ ಆರಂಭದಲ್ಲಿ ದಾಖಲಾಗಿದ್ದ ಹಲ್ಲೆ ಪ್ರಕರಣವನ್ನು, ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಕೊಲೆ ಪ್ರಕರಣವಾಗಿ (BNS ಕಲಂ 103) ಮಾರ್ಪಡಿಸಲಾಯಿತು.

ತನಿಖೆ ತೀವ್ರಗೊಳಿಸಿದ ಪೊಲೀಸರು ಪ್ರಮುಖ ಆರೋಪಿ ರಫೀಕ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಹಲ್ಲೆಗೆ ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಮತ್ತೋರ್ವ ಆರೋಪಿ ಮನೋಹರ್‌ನನ್ನು ಕೂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಶಂಕಿಸಲಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಪತ್ತೆಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.





Comments