ಬಂಟ್ವಾಳ: ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 71 ಲಕ್ಷ ರೂ. ವಂಚನೆ; ಜಂಟಿ ವ್ಯವಸ್ಥಾಪಕನ ವಿರುದ್ಧ ಕೇಸ್ ದಾಖಲು
- sathyapathanewsplu
- Jan 3
- 1 min read

ಬಂಟ್ವಾಳ: ತಾಲೂಕಿನ ಪೆರ್ನೆ ಗ್ರಾಮದ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ ಎಟಿಎಂ ನಗದು ಮತ್ತು ಚಿನ್ನಾಭರಣ ದುರುಪಯೋಗಪಡಿಸಿಕೊಂಡ ಭಾರಿ ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಾಖೆಯ ಜಂಟಿ ವ್ಯವಸ್ಥಾಪಕ ಸುಬ್ರಹ್ಮಣ್ಯಂ (30) ಎಂಬುವವರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆರೋಪಿತನು ಕಳೆದ ಎರಡು ವರ್ಷಗಳಿಂದ ಇದೇ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಎಟಿಎಂ ಮೇಲ್ವಿಚಾರಣೆಯ ಹೊಣೆ ಹೊತ್ತಿದ್ದ ಎಂದು ತಿಳಿದುಬಂದಿದೆ.
ತನಿಖೆಯ ವರದಿಯ ಪ್ರಕಾರ, ಆರೋಪಿತ ಸುಬ್ರಹ್ಮಣ್ಯಂ 2024ರ ಫೆಬ್ರವರಿಯಿಂದ 2025ರ ಡಿಸೆಂಬರ್ ಅವಧಿಯಲ್ಲಿ ಎಟಿಎಂಗೆ ನಗದು ತುಂಬಿಸುವ ಸಂದರ್ಭದಲ್ಲಿ ವಂಚನೆ ಎಸಗಿದ್ದಾನೆ. ನಿಗದಿತ ಪ್ರಮಾಣದ ಹಣವನ್ನು ಜಮಾ ಮಾಡದೆ, ಒಟ್ಟು 70,86,000 ರೂಪಾಯಿಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ. ಅಷ್ಟೇ ಅಲ್ಲದೆ, ಡಿಸೆಂಬರ್ 19ರಂದು ಬ್ಯಾಂಕಿನ ಸೇಫ್ ಲಾಕರ್ ಪರಿಶೀಲಿಸಿದಾಗ 55,000 ರೂ. ಮೌಲ್ಯದ 4.400 ಗ್ರಾಂ ಚಿನ್ನವೂ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಒಟ್ಟಾರೆಯಾಗಿ 71,41,000 ರೂಪಾಯಿಗಳ ವಂಚನೆ ನಡೆದಿದೆ ಎಂದು ಅಂದಾಜಿಸಲಾಗಿದೆ.
ವಂಚನೆಯ ವಿಷಯ ಹಿರಿಯ ಅಧಿಕಾರಿಗಳಿಗೆ ತಿಳಿಯುತ್ತಿದ್ದಂತೆಯೇ ಆರೋಪಿತನು ಕೆಲಸಕ್ಕೆ ಗೈರುಹಾಜರಾಗಿ ತಲೆಮರೆಸಿಕೊಂಡಿದ್ದಾನೆ. ಬ್ಯಾಂಕ್ ಆಫ್ ಬರೋಡಾದ ಪ್ರಾದೇಶಿಕ ವ್ಯವಸ್ಥಾಪಕ ಸಿ.ವಿ.ಎಸ್. ಚಂದ್ರಶೇಖರ್ ಅವರು ನೀಡಿದ ದೂರಿನ ಮೇರೆಗೆ, ಉಪ್ಪಿನಂಗಡಿ ಪೊಲೀಸರು ಹೊಸ ಭಾರತೀಯ ನ್ಯಾಯ ಸಂಹಿತೆಯ (BNS-2023) ವಿವಿಧ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದು, ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.





Comments