ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ನಿಂದ ಸಹ ಕೈದಿಗಳಿಗೆ ಕಿರುಕುಳ ಆರೋಪ
- sathyapathanewsplu
- Dec 8
- 1 min read

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ವಿರುದ್ಧ ಗಂಭೀರ ಆರೋಪವೊಂದು ಕೇಳಿಬಂದಿದೆ. ಅವರು ತಮ್ಮ ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ವರದಿಯಾಗಿದೆ. ಈ ಬಾರಿ ದರ್ಶನ್ ಜೈಲು ಸೇರಿದಾಗಿನಿಂದ ಜೈಲಿನಲ್ಲಿ ಕಠಿಣ ನಿಯಮಗಳು ಜಾರಿಯಲ್ಲಿದ್ದು, ಇತ್ತೀಚೆಗೆ ಜೈಲಿನ ಪಾರ್ಟಿ ವಿಡಿಯೋ ವೈರಲ್ ಆದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಜೈಲಿನ ಮುಖ್ಯ ಸೂಪರಿಂಟೆಂಡೆಂಟ್ ಆಗಿ ಐಪಿಎಸ್ ಅಧಿಕಾರಿ ಅಂಶು ಕುಮಾರ್ ನೇಮಕಗೊಂಡ ನಂತರ, ಜೈಲಿನಲ್ಲಿ ಅತಿ ಕಠಿಣ ರೂಲ್ಸ್‌ಗಳನ್ನು ಜಾರಿಗೆ ತಂದಿದ್ದಾರೆ.
ಜೈಲಿನಲ್ಲಿ ಜಾರಿಗೆ ಬಂದಿರುವ ಈ ಹೊಸ ಮತ್ತು ಕಠಿಣ ನಿಯಮಗಳಿಂದ ನಟ ದರ್ಶನ್ ತತ್ತರಿಸಿ ಹೋಗಿದ್ದಾರೆ ಎನ್ನಲಾಗಿದೆ. ವಿಐಪಿ ಸೌಲಭ್ಯಗಳ ನಿರೀಕ್ಷೆಯಲ್ಲಿದ್ದ ದರ್ಶನ್ ಅವರಿಗೆ ಈಗ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲಾಗುತ್ತಿದೆ. ಅವರು ಕಡ್ಡಾಯವಾಗಿ ಸಾಲಿನಲ್ಲಿ ನಿಂತು ತಾವೇ ಊಟ ತೆಗೆದುಕೊಂಡು ಬರಬೇಕಿದೆ. ಅಷ್ಟೇ ಅಲ್ಲದೆ, ಅವರು ಇರುವ ಕೋಣೆಯ ಒಳಗಿನ ಶೌಚಾಲಯವನ್ನು ಕೂಡ ತಾವೇ ಸ್ವಚ್ಛಗೊಳಿಸಬೇಕಿದೆ. ಈ ಕಟ್ಟುನಿಟ್ಟಾದ ನಿಯಮಗಳು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ದರ್ಶನ್ ಮಾನಸಿಕವಾಗಿ ತೊಂದರೆಗೆ ಒಳಗಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರಂಭದಲ್ಲಿ ಜಾಮೀನು ಪಡೆದು ಹೊರಗಡೆ ಹಾಯಾಗಿ ಸುತ್ತಾಡುತ್ತಿದ್ದ ದರ್ಶನ್ ಅವರಿಗೆ, ಸುಪ್ರೀಂಕೋರ್ಟ್ ಜಾಮೀನು ರದ್ದುಗೊಳಿಸಿದ ನಂತರ ಮತ್ತೆ ಜೈಲು ಸೇರುವಂತಾಯಿತು. ಈಗ ಜೈಲಿನ ಮುಖ್ಯಸ್ಥರ ನೇಮಕದ ನಂತರ ನಿಯಮಗಳು ಕಠಿಣಗೊಂಡಿರುವುದರಿಂದ, ದರ್ಶನ್ ಅವರಿಗೆ ಜೈಲಿನ ದಿನಗಳು ಸುಲಭವಲ್ಲದಂತಾಗಿದೆ. ಸಹ ಕೈದಿಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳ ನಡುವೆಯೇ, ದರ್ಶನ್ ಅವರು ಜೈಲಿನ ಕಠಿಣ ಪರಿಸ್ಥಿತಿಗಳನ್ನು ಎದುರಿಸಲು ಪರದಾಡುತ್ತಿದ್ದಾರೆ ಎಂದು ವರದಿಯಾಗಿದೆ.






Comments