ಮೆಕ್ಸಿಕೋದಿಂದ ಭಾರತದ ಉತ್ಪನ್ನಗಳಿಗೆ ಶೇ. 50ರಷ್ಟು ಸುಂಕ

ಅಮೆರಿಕಾದ ಸುಂಕ ಸಮರದ ಬೆನ್ನಲ್ಲೇ ಈಗ ಮೆಕ್ಸಿಕೋ ಕೂಡ ಏಷ್ಯಾದ ದೇಶಗಳಿಂದ ಆಮದಾಗುವ ಉತ್ಪನ್ನಗಳ ಮೇಲೆ ಶೇ. 50ರಷ್ಟು ಸುಂಕ ವಿಧಿಸಲು ಮುಂದಾಗಿದೆ. ಮೆಕ್ಸಿಕೋದ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರು ಸ್ಥಳೀಯ ಉದ್ಯಮಗಳಿಗೆ ಆದ್ಯತೆ ನೀಡುವ ಉದ್ದೇಶದಿಂದ ಈ ನಿರ್ಧಾರ ಕೈಗೊಂಡಿದ್ದಾರೆ. 2026ರ ಜನವರಿಯಿಂದ ಜಾರಿಗೆ ಬರಲಿರುವ ಈ ಸುಂಕ ವಿಧಿಸುವ ಮಸೂದೆಗೆ ಮೆಕ್ಸಿಕನ್ ಸೆನೆಟ್ (ಮೇಲ್ಮನೆ) ಅಂತಿಮ ಅನುಮೋದನೆ ನೀಡಿದೆ. ಈ ನಿರ್ಣಯದ ಪರವಾಗಿ 76 ಮತ್ತು ವಿರುದ್ಧವಾಗಿ ಕೇವಲ 5 ಸದಸ್ಯರು ಮತ ಚಲಾಯಿಸಿದ್ದು, ಮಸೂದೆಗೆ ಸುಲಭವಾಗಿ ಅಂಗೀಕಾರ ದೊರೆತಿದೆ. ಈ ಹೊಸ ನಿಯಮವು ಮುಖ್ಯವಾಗಿ ಮೆಕ್ಸಿಕೋದೊಂದಿಗೆ ವ್ಯಾಪಾರ ಒಪ್ಪಂದಗಳನ್ನು ಹೊಂದಿರದ ಏಷ್ಯಾದ ರಾಷ್ಟ್ರಗಳ 1,400ಕ್ಕೂ ಹೆಚ್ಚು ಉತ್ಪನ್ನಗಳ ಮೇಲೆ ಶೇ. 5 ರಿಂದ ಶೇ. 50ರವರೆಗೆ ಸುಂಕವನ್ನು ಹೆಚ್ಚಿಸಲಿದೆ.
ಈ ಸುಂಕ ಹೆಚ್ಚಳದಿಂದಾಗಿ ಭಾರತ ಸೇರಿದಂತೆ ಚೀನಾ, ದಕ್ಷಿಣ ಕೊರಿಯಾ, ಥೈಲ್ಯಾಂಡ್ ಮತ್ತು ಇಂಡೋನೇಷ್ಯಾದಂತಹ ಪ್ರಮುಖ ಏಷ್ಯನ್ ರಾಷ್ಟ್ರಗಳ ಉತ್ಪನ್ನಗಳಿಗೆ ಬೃಹತ್ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. ಆಟೋ ಭಾಗಗಳು, ಜವಳಿ, ಪ್ಲಾಸ್ಟಿಕ್‌ಗಳು, ಬಟ್ಟೆ ಮತ್ತು ಉಕ್ಕಿನಂತಹ ಸರಕುಗಳ ಮೇಲೆ ಈ ಸುಂಕವು ಗರಿಷ್ಠ ಶೇ. 50ರವರೆಗೆ ಪರಿಣಾಮ ಬೀರಲಿದೆ. ಭಾರತವು ಮೆಕ್ಸಿಕೋಗೆ ಸಾಫ್ಟ್‌ವೇರ್ ಮತ್ತು ಔಷಧಗಳನ್ನು ಪ್ರಮುಖವಾಗಿ ರಫ್ತು ಮಾಡಿದರೂ, ಈ ಹೊಸ ನೀತಿಯಿಂದಾಗಿ ಆಟೋಮೊಬೈಲ್ ಮತ್ತು ದೂರವಾಣಿಯಂತಹ ಉತ್ಪನ್ನಗಳ ಮೇಲೆ ತೀವ್ರ ಹೊಡೆತ ಬೀಳಲಿದೆ. ಮೆಕ್ಸಿಕನ್ ಆರ್ಥಿಕ ಸಚಿವಾಲಯದ ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಭಾರತವು ಮೆಕ್ಸಿಕನ್ ಮಾರುಕಟ್ಟೆಗೆ $1.3 ಬಿಲಿಯನ್ ಮೌಲ್ಯದ ಆಟೋಮೊಬೈಲ್‌ಗಳನ್ನು ಮತ್ತು $242 ಮಿಲಿಯನ್ ಮೌಲ್ಯದ ದೂರವಾಣಿಗಳನ್ನು ರಫ್ತು ಮಾಡಿತ್ತು.
ಮೆಕ್ಸಿಕನ್ ಅಧ್ಯಕ್ಷೆ ಕ್ಲೌಡಿಯಾ ಶೀನ್‌ಬಾಮ್ ಅವರ ಈ ನಡೆ ಡೊನಾಲ್ಡ್ ಟ್ರಂಪ್ ಅವರ 'ಅಮೇರಿಕಾ ಫಸ್ಟ್' ಕಾರ್ಯಸೂಚಿಯಂತೆಯೇ 'ಸ್ಥಳೀಯ ಉದ್ಯಮಕ್ಕೆ ಆದ್ಯತೆ' ನೀಡುವ ನೀತಿಯಾಗಿದೆ ಎಂದು ವ್ಯಾಪಾರ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಈ ಮಸೂದೆ ಈಗಾಗಲೇ ಕೆಳಮನೆಯಿಂದ ಅಂಗೀಕರಿಸಲ್ಪಟ್ಟಿತ್ತು ಮತ್ತು ಈಗ ಸೆನೆಟ್‌ನ ಒಪ್ಪಿಗೆಯೊಂದಿಗೆ ಜಾರಿಗೆ ಬರಲು ಸಿದ್ಧವಾಗಿದೆ. ಇದರಿಂದಾಗಿ ಭಾರತದ ರಫ್ತುದಾರರು ತಮ್ಮ ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾದ ಮೆಕ್ಸಿಕೋದಲ್ಲಿ ಸ್ಪರ್ಧಾತ್ಮಕ ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗಿದೆ.







Comments