'ಮಹಾನಟಿ ಸೀಸನ್ 2' ವಿಜೇತೆ ಮಂಗಳೂರಿನ ವಂಶಿ; ಚಿನ್ನದ ಕಿರೀಟ ಮುಡಿಗೇರಿಸಿಕೊಂಡ ನಟಿ!
- sathyapathanewsplu
- Nov 10
- 1 min read

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಜನಪ್ರಿಯ ರಿಯಾಲಿಟಿ ಶೋ 'ಮಹಾನಟಿ ಸೀಸನ್ 2' ರ ವಿಜೇತರಾಗಿ ಮಂಗಳೂರಿನ ಪ್ರತಿಭೆ ವಂಶಿ ರತ್ನಾಕರ್ ಹೊರಹೊಮ್ಮಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ತಮ್ಮ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸುತ್ತಾ ಬಂದಿದ್ದ ವಂಶಿ, ಅಂತಿಮವಾಗಿ ಮಹಾನಟಿ ಪಟ್ಟವನ್ನು ತಮ್ಮದಾಗಿಸಿಕೊಂಡರು. ಅವರಿಗೆ ವೈಟ್‌ಗೋಲ್ಡ್ ವತಿಯಿಂದ 15 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಬಹುಮಾನವಾಗಿ ನೀಡಲಾಗಿದೆ. ಬೆಳಗಾವಿಯ ವರ್ಷಾ ಡಿಗ್ರಜೆ ಅವರು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದರೆ, ಮೈಸೂರಿನ ಶ್ರೀಯಾ ಅಗಮ್ಯ ಅವರು ಎರಡನೇ ರನ್ನರ್ ಅಪ್ ಸ್ಥಾನ ಪಡೆದಿದ್ದಾರೆ. ವರ್ಷಾ ಡಿಗ್ರಜೆ ಅವರಿಗೆ ಜಾರ್ ಆಯಪ್ ವತಿಯಿಂದ 10 ಲಕ್ಷ ರೂ.ಗಳ ನಗದು ಬಹುಮಾನ ಸಿಕ್ಕಿದೆ. ಶನಿವಾರ (ನವೆಂಬರ್ 8) ಮತ್ತು ಭಾನುವಾರ (ನವೆಂಬರ್ 9) ರಂದು ಈ ಶೋನ ಫಿನಾಲೆ ಸಂಚಿಕೆಗಳು ಪ್ರಸಾರಗೊಂಡಿವೆ.
ವಿಜೇತರಾದ ಬಳಿಕ ಸಂತಸ ವ್ಯಕ್ತಪಡಿಸಿದ ವಂಶಿ ಅವರು, "ನನಗೆ ತುಂಬಾ ಖುಷಿಯಾಗುತ್ತಿದೆ. ಹಿರಿಯ ನಟಿ ಬಿ. ಸರೋಜಾ ದೇವಿ ಅವರ ನಟನೆಯನ್ನು ನೋಡಿಕೊಂಡು ಬಂದಿದ್ದೇನೆ. ಈ ಟ್ರೋಫಿ ಮೂಲಕ ಅವರ ಆಶೀರ್ವಾದ ನನಗಿದೆ ಎನಿಸುತ್ತಿದೆ. ನಟಿಯಾಗಬೇಕು ಎಂದು ಕನಸು ಕಂಡಿದ್ದ ನನಗೆ ಇದು ಒಂದು ಸಣ್ಣ ಹೆಜ್ಜೆ" ಎಂದು ತಮ್ಮ ಭಾವನೆಗಳನ್ನು ಹಂಚಿಕೊಂಡಿದ್ದಾರೆ. 'ಮಹಾನಟಿ ಸೀಸನ್ 2' ರ ಜಡ್ಜ್ ಸ್ಥಾನದಲ್ಲಿ ಖ್ಯಾತ ನಟ ರಮೇಶ್ ಅರವಿಂದ್, ನಟಿ ನಿಶ್ವಿಕಾ ನಾಯ್ಡು ಮತ್ತು ನಿರ್ದೇಶಕ ತರುಣ್ ಸುಧೀರ್ ಅವರು ಇದ್ದರು. ಇವರೆಲ್ಲರೂ ಶೋ ಅನ್ನು ಉತ್ತಮವಾಗಿ ನಡೆಸಿಕೊಟ್ಟಿದ್ದಾರೆ.
'ಮಹಾನಟಿ' ರಿಯಾಲಿಟಿ ಶೋನ ಪ್ರಮುಖ ಉದ್ದೇಶವೇ ಕಿರುತೆರೆಯ ಪ್ರತಿಭಾನ್ವಿತ ನಟಿಯರಿಗೆ ಬೆಳ್ಳಿತೆರೆಯಲ್ಲಿ (ಸಿಲ್ವರ್ ಸ್ಕ್ರೀನ್) ಅವಕಾಶಗಳನ್ನು ಒದಗಿಸುವುದು. ಈ ಶೋನಲ್ಲಿ ಬೇರೆ ಬೇರೆ ಸುತ್ತುಗಳ ಮೂಲಕ ನಟಿಯರಿಗೆ ಬೆಳ್ಳಿತೆರೆಯಲ್ಲಿ ಹೇಗೆ ನಟಿಸಬೇಕು, ಹೇಗೆ ಕಾಣಿಸಿಕೊಳ್ಳಬೇಕು ಎಂಬುದರ ಜೊತೆಗೆ ಚಿತ್ರರಂಗದ ಇತರೆ ಹಲವು ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ. ಈ ತರಬೇತಿಗಳು ಈ ನಟಿಯರಿಗೆ ಮುಂದಿನ ದಿನಗಳಲ್ಲಿ ತಮ್ಮ ವೃತ್ತಿಜೀವನದಲ್ಲಿ ಅತ್ಯಂತ ಸಹಾಯಕವಾಗಲಿವೆ.






Comments