ಎಡಮಂಗಲ: ಚಿರತೆ ಅಟ್ಟಹಾಸ – ಮನೆಯಂಗಳದಲ್ಲಿದ್ದ ನಾಯಿಯನ್ನು ಹೊತ್ತೊಯ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
- sathyapathanewsplu
- Jan 12
- 1 min read

ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ಚಿರತೆ ಹಾವಳಿ ಮಿತಿಮೀರಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕ ಉಂಟಾಗಿದೆ. ಪಂಜ ಮೀಸಲು ಅರಣ್ಯ ವ್ಯಾಪ್ತಿಗೆ ಒಳಪಡುವ ಈ ಗ್ರಾಮದಲ್ಲಿ ಚಿರತೆಯ ಚಟುವಟಿಕೆಗಳು ದಿನೇದಿನೇ ಹೆಚ್ಚುತ್ತಿವೆ.
ಜನವರಿ 7ರಂದು ಎಡಮಂಗಲ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಸದಸ್ಯೆ ಸುಮ ನೂಜಿಲ ಅವರ ಮನೆಯಂಗಳಕ್ಕೆ ನುಗ್ಗಿದ ಬೃಹತ್ ಗಾತ್ರದ ಚಿರತೆ, ಸಾಕು ನಾಯಿಯನ್ನು ಬೇಟೆಯಾಡಿ ಹೊತ್ತೊಯ್ದಿದೆ. ಈ ಸಂಪೂರ್ಣ ಘಟನೆ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆಯ ದಿನ ಕುಟುಂಬದವರು ಕಾರ್ಯಕ್ರಮಕ್ಕಾಗಿ ಹೊರಗಿದ್ದರಿಂದ ಮನೆಗೆ ಬೀಗ ಹಾಕಲಾಗಿತ್ತು. ಸಂಜೆ ಸುಮಾರು 7 ಗಂಟೆಯ ವೇಳೆಗೆ ಮನೆಯಂಗಳಕ್ಕೆ ಲಗ್ಗೆ ಇಟ್ಟ ಚಿರತೆ, ಸುಮಾರು ಒಂದು ಗಂಟೆ ಕಾಲ ಮನೆಯ ಸುತ್ತಮುತ್ತಲೇ ಹೊಂಚು ಹಾಕಿ, ಅಂತಿಮವಾಗಿ ನಾಯಿಯನ್ನು ಕಚ್ಚಿಕೊಂಡು ಪರಾರಿಯಾಗಿದೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸ್ಪಷ್ಟವಾಗಿ ದಾಖಲಾಗಿವೆ.
ಸರಣಿ ನಾಯಿಗಳ ನಾಪತ್ತೆ:
ಕಳೆದ ಕೆಲ ದಿನಗಳಿಂದ ಈ ಪ್ರದೇಶದ ನಾಲ್ಕು ಮನೆಗಳ ಸಾಕು ನಾಯಿಗಳು ನಿಗೂಢವಾಗಿ ನಾಪತ್ತೆಯಾಗಿದ್ದವು. ಸಿಸಿಟಿವಿ ವ್ಯವಸ್ಥೆ ಇಲ್ಲದ ಕಾರಣ ಆಗ ಚಿರತೆಯ ಬಗ್ಗೆ ಸುಳಿವು ದೊರೆತಿರಲಿಲ್ಲ. ಇದೀಗ ಸಿಸಿಟಿವಿ ದೃಶ್ಯಗಳಿಂದ ಈ ಭಾಗದಲ್ಲಿ ಚಿರತೆ ಬೀಡು ಬಿಟ್ಟಿರುವುದು ಖಚಿತವಾಗಿದ್ದು, ಹಿಂದಿನ ನಾಯಿಗಳ ನಾಪತ್ತೆಗೂ ಇದೇ ಚಿರತೆ ಕಾರಣ ಎನ್ನುವ ಅನುಮಾನ ಗಟ್ಟಿಯಾಗುತ್ತಿದೆ.
ಕೃಷಿ ಚಟುವಟಿಕೆ ಸ್ಥಗಿತ – ಗ್ರಾಮಸ್ಥರಲ್ಲಿ ಭೀತಿ:
ಚಿರತೆ ದಾಳಿಯ ಭೀತಿಯಿಂದ ಸಂಜೆಯಾಗುತ್ತಿದ್ದಂತೆ ಗ್ರಾಮಸ್ಥರು ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ರಬ್ಬರ್ ಟ್ಯಾಪಿಂಗ್ ಸೇರಿದಂತೆ ಕೃಷಿ ಕೆಲಸಗಳಿಗೆ ಕಾರ್ಮಿಕರು ತೆರಳುತ್ತಿಲ್ಲ, ಇದರಿಂದ ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ. ಶಾಲಾ ಮಕ್ಕಳು ಹಾಗೂ ಕಾರ್ಮಿಕರು ಕಾಡು ಹಾದಿಯಲ್ಲಿ ಸಂಚರಿಸಬೇಕಾದ ಅನಿವಾರ್ಯತೆ ಇರುವುದರಿಂದ, ಅಪಾಯ ಸಂಭವಿಸುವ ಮುನ್ನವೇ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಸುಮಾರು ಎರಡು ವಾರಗಳ ಹಿಂದೆ ಪಾಲೋಳಿ ಸೇತುವೆ ವ್ಯಾಪ್ತಿಯಲ್ಲಿ ಅರಣ್ಯಾಧಿಕಾರಿಗಳ ತಂಡ ಭೇಟಿ ನೀಡಿದ್ದರೂ, ಸ್ಪಷ್ಟ ಕ್ರಮ ಕೈಗೊಳ್ಳಲಾಗಿಲ್ಲ ಎನ್ನುವ ಆರೋಪಗಳು ಕೇಳಿಬಂದಿವೆ. “ಅರಣ್ಯ ಇಲಾಖೆ ಕೇವಲ ಭೇಟಿ ನೀಡುವುದಕ್ಕೆ ಸೀಮಿತವಾಗದೇ, ತಕ್ಷಣ ಬೋನು ಇಟ್ಟು ಚಿರತೆಯನ್ನು ಸೆರೆಹಿಡಿಯಬೇಕು” ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.





Comments