ಧಾರ್ಮಿಕ ಕೇಂದ್ರಗಳ ಹಾದಿಯಲ್ಲೇ ಮಾಲಿನ್ಯ: ಭಕ್ತರಿಂದ ತೀವ್ರ ಅಸಮಾಧಾನ
- sathyapathanewsplu
- Jan 6
- 1 min read

ಅಲಂಕಾರು ಮತ್ತು ಕುದ್ಮಾರು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಬದಿಯಲ್ಲಿ ಅತಿಯಾಗಿ ಕಸ ಸುರಿಯಲಾಗುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಈ ರಸ್ತೆ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಾದ ಕೂರಾ ಮಸೀದಿ, ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಗಳಿಗೆ ತೆರಳುವ ಮುಖ್ಯ ಹಾದಿಯಾಗಿದ್ದು, ದಿನನಿತ್ಯ ನೂರಾರು ಭಕ್ತರು ಈ ಮಾರ್ಗವನ್ನು ಅವಲಂಬಿಸಿದ್ದಾರೆ.
ಕುದ್ಮಾರಿನಿಂದ ಕೇವಲ 50–100 ಮೀಟರ್ ಅಂತರದಲ್ಲಿರುವ ಅಲಂಕಾರು ಮುಖ್ಯ ರಸ್ತೆಯ ಬದಿಯಲ್ಲಿ ಇತ್ತೀಚಿನ ದಿನಗಳಲ್ಲಿ ಹೋಟೆಲ್ ತ್ಯಾಜ್ಯ, ಪ್ಲಾಸ್ಟಿಕ್ ಮತ್ತು ಕೊಳೆತ ವಸ್ತುಗಳ ರಾಶಿ ಹೆಚ್ಚಾಗಿ ಕಂಡುಬರುತ್ತಿದೆ. ಮಳೆಯ ನೀರಿನಲ್ಲಿ ಈ ಕಸ ಕೊಳೆಯುತ್ತಿರುವುದರಿಂದ ತೀವ್ರ ದುರ್ಗಂಧ ಹರಡುತ್ತಿದ್ದು, ಸಾಂಕ್ರಾಮಿಕ ರೋಗಗಳು ವ್ಯಾಪಿಸುವ ಭೀತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಪ್ರವೇಶ ದ್ವಾರದಲ್ಲೇ ಇಂತಹ ಅಶುಚಿತ್ವ ಕಂಡುಬರುವುದು ಅಲಂಕಾರು ಮತ್ತು ಕುದ್ಮಾರು ಗ್ರಾಮದ ಸೌಂದರ್ಯಕ್ಕೂ ಧಕ್ಕೆಯಾಗಿದ್ದು, ಪವಿತ್ರ ಕ್ಷೇತ್ರಗಳಿಗೆ ತೆರಳುವ ಭಕ್ತರ ಮನಸ್ಸಿಗೂ ನೋವುಂಟು ಮಾಡುತ್ತಿದೆ. ವಿಶೇಷವಾಗಿ ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ಬಂದು ಕಿಡಿಗೇಡಿಗಳು ರಸ್ತೆ ಬದಿ ಕಸ ಎಸೆಯುತ್ತಿರುವ ಅನುಮಾನ ವ್ಯಕ್ತವಾಗುತ್ತಿದೆ.
ಗ್ರಾಮಸ್ಥರ ಆಗ್ರಹ
ಸ್ಥಳೀಯರು ಸಂಬಂಧಪಟ್ಟ ಪಂಚಾಯತ್ ಆಡಳಿತವು ತಕ್ಷಣ ಕಸದ ರಾಶಿಯನ್ನು ತೆರವುಗೊಳಿಸಬೇಕು, ರಾತ್ರಿ ವೇಳೆ ಕಸ ಎಸೆಯುವವರನ್ನು ಪತ್ತೆಹಚ್ಚಿ ದಂಡ ವಿಧಿಸಬೇಕು ಹಾಗೂ ಈ ಪ್ರದೇಶದಲ್ಲಿ ಕಸ ಹಾಕದಂತೆ ಎಚ್ಚರಿಕೆ ಫಲಕಗಳನ್ನು ಅಳವಡಿಸಬೇಕು ಎಂದು ಒತ್ತಾಯಿಸಿದ್ದಾರೆ.
“ದೇವಸ್ಥಾನ ಮತ್ತು ಮಸೀದಿಗಳಿಗೆ ಹೋಗುವ ಹಾದಿಯಲ್ಲೇ ಇಷ್ಟೊಂದು ಕಸ ಬಿದ್ದಿರುವುದು ಅಕ್ಷಮ್ಯ. ಅಧಿಕಾರಿಗಳು ತಕ್ಷಣ ಎಚ್ಚೆತ್ತುಕೊಂಡು ಈ ಜಾಗವನ್ನು ಸ್ವಚ್ಛಗೊಳಿಸಬೇಕು” ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಸಂಬಂಧಪಟ್ಟ ಅಧಿಕಾರಿಗಳು ಈ ಸಮಸ್ಯೆಗೆ ಶೀಘ್ರ ಸ್ಪಂದಿಸಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ





Comments