ಕುದ್ಮಾರು: ಅಯ್ಯಪ್ಪ ಸ್ವಾಮಿ ಮಾಲಾದಾರಿಗಳ ಸ್ವಚ್ಛ ಸೇತುವೆ ಕಾರ್ಯಕ್ಕೆ ಸ್ಥಳೀಯರ ಪ್ರಶಂಸೆ
- sathyapathanewsplu
- Dec 20, 2025
- 1 min read

ಕುದ್ಮಾರು: ಸಮಾಜದಲ್ಲಿ ಎಲ್ಲವೂ ಸರಕಾರವೇ ಮಾಡಬೇಕು ಎಂದು ಕಾಯುವವರ ನಡುವೆ, ತಮ್ಮೂರಿನ ಆಸ್ತಿಯನ್ನು ಉಳಿಸಿಕೊಳ್ಳಲು ಇಬ್ಬರು ಅಯ್ಯಪ್ಪ ಮಾಲಾದಾರಿಗಳು ಕೈಜೋಡಿಸಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಕಡಬ ತಾಲೂಕು ಕುದ್ಮಾರು ಗ್ರಾಮದ ಶಾಂತಿಮೊಗರು ಕುಮಾರಧಾರ ಸೇತುವೆ ಮೇಲೆ ಸತೀಶ್ ಮತ್ತು ವಿಷ್ಣು ಎಂಬ ಅಯ್ಯಪ್ಪ ಮಾಲಾದಾರಿಗಳು ಸ್ವಯಂಪ್ರೇರಿತರಾಗಿ ಸ್ವಚ್ಛತಾ ಕಾರ್ಯ ನಡೆಸಿದ್ದಾರೆ.

ಸ್ವಚ್ಛ ಸೇತುವೆ ಕಾರ್ಯಕ್ರಮ:
ಸೇತುವೆಯ ಬದಿಗಳಲ್ಲಿ ಕಸ ಕಡ್ಡಿಗಳು ಶೇಖರಣೆಯಾಗಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ಅಡಚಣೆಯಾಗುತ್ತಿತ್ತು. ಇದನ್ನು ಗಮನಿಸಿದ ಸತೀಶ್ ಮತ್ತು ವಿಷ್ಣು ಅವರು 'ಸ್ವಚ್ಛ ಸೇತುವೆ' ಕಾರ್ಯಕ್ರಮದಡಿಯಲ್ಲಿ ಪೊರಕೆ ಹಿಡಿದು ರಸ್ತೆ ಬದಿಯ ಕಸವನ್ನು ಗುಡಿಸಿ, ಚರಂಡಿ ಪೈಪ್‌ಗಳಲ್ಲಿದ್ದ ಹೂಳನ್ನು ತೆಗೆದು ಸ್ವಚ್ಛಗೊಳಿಸಿದ್ದಾರೆ.
ಇವರ ಈ ನಿಸ್ವಾರ್ಥ ಸೇವೆಯಿಂದಾಗಿ ಈಗ ಸೇತುವೆಯು ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದೆ.
ಯಾವುದೇ ಫಲಾಪೇಕ್ಷೆಯಿಲ್ಲದೆ ಹಗಲಿರುಳು ವಾಹನಗಳು ಸಂಚರಿಸುವ ಈ ಪ್ರಮುಖ ಸೇತುವೆಯನ್ನು ಸ್ವಚ್ಛಗೊಳಿಸಿದ ಈ ಇಬ್ಬರು ಅಯ್ಯಪ್ಪ ಮಾಲಾದಾರಿಗಳ ಕಾರ್ಯಕ್ಕೆ ಗುರುಸ್ವಾಮಿ ಮತ್ತು ಸ್ಥಳೀಯರಿಂದ ಹಾಗೂ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
"ಯುವಜನತೆ ಮನಸ್ಸು ಮಾಡಿದರೆ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡಲು ಸಾಧ್ಯ" ಎಂದು ಸ್ಥಳೀಯರು ಶ್ಲಾಘಿಸಿದ್ದಾರೆ.





Comments