ಕಾರ್ತಿಕ ಹುಣ್ಣಿಮೆಯಂದು ಬೃಹತ್ ಸೂಪರ್ ಮೂನ್ ದರ್ಶನ!
- sathyapathanewsplu
- Nov 5
- 1 min read

ಇಂದು ಕಾರ್ತಿಕ ಹುಣ್ಣಿಮೆಯ ಪವಿತ್ರ ದಿನವಾಗಿದ್ದು, ರಾತ್ರಿ ಆಕಾಶದಲ್ಲಿ ಅತ್ಯಂತ ವಿಶಿಷ್ಟವಾದ ಖಗೋಳ ವಿದ್ಯಮಾನವೊಂದು ಗೋಚರಿಸಲಿದೆ. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ತೀರಾ ಸಮೀಪ ಬರುವ ಕಾರಣ, ಇಂದು ಸೂಪರ್ ಮೂನ್ ದರ್ಶನವಾಗಲಿದೆ. ಹುಣ್ಣಿಮೆಯ ದಿನದಂದು ಚಂದ್ರ ಭೂಮಿಗೆ ಸಮೀಪಿಸುವುದರಿಂದ (ಸುಮಾರು 3,56,400 ಕಿ.ಮೀ.) ಮಾಮೂಲಿಗಿಂತಲೂ ದೊಡ್ಡದಾಗಿ ಮತ್ತು ಪ್ರಕಾಶಮಾನವಾಗಿ ಗೋಚರಿಸಲಿದ್ದಾನೆ. ಹುಣ್ಣಿಮೆಯ ಜೊತೆಗೆ ಚಂದ್ರ ಭೂಮಿಗೆ ಅತೀ ಸಮೀಪದಲ್ಲಿರುವ ಈ ವಿದ್ಯಮಾನವು ಕೇವಲ ಕಣ್ಣಿಗೆ ಹಬ್ಬ ಮಾತ್ರವಲ್ಲದೆ, ಒಂದು ಅಪರೂಪದ ಪ್ರಕೃತಿಯ ಸೊಬಗಾಗಿದೆ.
ಪ್ರತಿ 28 ದಿನಗಳಿಗೊಮ್ಮೆ ಚಂದ್ರನು ದೀರ್ಘವೃತ್ತದಲ್ಲಿ ಭೂಮಿಯನ್ನು ಸುತ್ತುವಾಗ ಒಮ್ಮೆ ಭೂಮಿಗೆ ಸಮೀಪ ಬರುವುದುಂಟು. ಈ 'ಪೆರಿಜಿ' (ಭೂಮಿಗೆ ಸಮೀಪದ ಬಿಂದು) ಮತ್ತು ಹುಣ್ಣಿಮೆ ಒಂದೇ ದಿನ ಸಂಭವಿಸಿದಾಗ ಚಂದ್ರನು ಮಾಮೂಲಿ ಹುಣ್ಣಿಮೆ ಚಂದ್ರನಿಗಿಂತಲೂ ಶೇಕಡಾ 14ರಷ್ಟು ದೊಡ್ಡದಾಗಿ ಮತ್ತು ಶೇಕಡಾ 30ರಷ್ಟು ಹೆಚ್ಚು ಪ್ರಕಾಶಮಾನವಾಗಿ ಕಾಣಿಸುತ್ತಾನೆ. ಈ ವರ್ಷ ಒಟ್ಟು ಮೂರು ಸೂಪರ್ ಮೂನ್ ವಿದ್ಯಮಾನಗಳು ಸಂಭವಿಸುತ್ತಿದ್ದು, ಅಕ್ಟೋಬರ್ ತಿಂಗಳ ವಿದ್ಯಮಾನ ಈಗಾಗಲೇ ಮುಗಿದಿದೆ. ಇದೀಗ ನಡೆಯುತ್ತಿರುವುದು ಎರಡನೇಯ ಸೂಪರ್ ಮೂನ್ ಆಗಿದೆ.
ಈ ಸರಣಿಯ ಮೂರು ಸೂಪರ್ ಮೂನ್‌ಗಳಲ್ಲಿ, ಇಂದು ನಡೆಯಲಿರುವ ಹುಣ್ಣಿಮೆಯೇ ಅತ್ಯಂತ ಪ್ರಮುಖವಾಗಿದೆ. ಏಕೆಂದರೆ, ಇವತ್ತಿನ ದಿನದಂದು ಚಂದ್ರನು ಭೂಮಿಗೆ ಅತೀ ಸಮೀಪದಲ್ಲಿರಲಿದ್ದಾನೆ. ಹೀಗಾಗಿ, ಈ ವರ್ಷದ ಸೂಪರ್ ಮೂನ್‌ಗಳಲ್ಲಿ ಇದೇ ಅತಿದೊಡ್ಡ ಸೂಪರ್ ಮೂನ್ ಆಗಿದ್ದು, ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿಯುವಂತಹ ದೃಶ್ಯವನ್ನು ನೀಡಲಿದೆ. ಸಾರ್ವಜನಿಕರು ಆಕಾಶದಲ್ಲಿ ಮಿರ ಮಿರ ಮಿಂಚುವ ಬೃಹತ್ ಬೆಳದಿಂಗಳಿನ ಚಂದ್ರನನ್ನು ವೀಕ್ಷಿಸಲು ಸಿದ್ಧರಾಗಿದ್ದಾರೆ.






Comments