ಕಬ್ಬು ಬೆಳೆಗಾರರ ಪ್ರತಿಭಟನೆಗೆ ತಾತ್ಕಾಲಿಕ ತೆರೆ: ಟನ್‌ಗೆ ₹3,300 ದರ ನಿಗದಿ
- sathyapathanewsplu
- Nov 8
- 1 min read

ರೈತರ ಪ್ರತಿಭಟನೆಯ ಕಿಚ್ಚು ತೀವ್ರಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಶುಕ್ರವಾರ ಸಭೆ ನಡೆಸಿ, ಪ್ರತಿ ಟನ್ ಕಬ್ಬಿಗೆ ₹3,300 ದರ ನಿಗದಿಪಡಿಸುವ ಮೂಲಕ ಬಿಕ್ಕಟ್ಟಿಗೆ ತಾತ್ಕಾಲಿಕ ತೆರೆ ಎಳೆದಿದ್ದಾರೆ. ಬೆಂಬಲ ಬೆಲೆಗೆ ಒತ್ತಾಯಿಸಿ ಕಬ್ಬು ಬೆಳೆಗಾರರು ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು. ರೈತರ ಬೇಡಿಕೆ ಈಡೇರಿಸಲು ಕಾರ್ಖಾನೆ ಮಾಲೀಕರು ಸಿದ್ಧರಿರಲಿಲ್ಲ; ₹3,500 ನೀಡಿದರೆ ಭಾರಿ ನಷ್ಟವಾಗುತ್ತದೆ ಎಂದು ಅವರು ವಾದಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಅಂತಿಮ ನಿರ್ಧಾರ ಪ್ರಕಟಿಸಿದ್ದಾರೆ.
ಸಭೆಯು ದರ ನಿಗದಿಯ ಕುರಿತು ತೀವ್ರ ಚರ್ಚೆಗೆ ಸಾಕ್ಷಿಯಾಯಿತು. ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಟನ್‌ಗೆ ₹3,200 ರೂಪಾಯಿಗಳಿಗಿಂತ ಹೆಚ್ಚು ನೀಡಲು ಸಾಧ್ಯವಿಲ್ಲ ಎಂದು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಸಿಎಂ ಸಿದ್ದರಾಮಯ್ಯ ಅವರು ಒಂದು ಮಧ್ಯಮಾರ್ಗವನ್ನು ಸೂಚಿಸಿದರು. "ನಾವು ಸರ್ಕಾರದಿಂದ ಪ್ರತಿ ಟನ್‌ಗೆ ₹50 ಸಬ್ಸಿಡಿ ನೀಡುತ್ತೇವೆ. ನೀವು (ಕಾರ್ಖಾನೆ ಮಾಲೀಕರು) ಹೆಚ್ಚುವರಿಯಾಗಿ ₹50 ಸೇರಿಸಿ, ಪ್ರತಿ ಟನ್ ಕಬ್ಬಿಗೆ ಒಟ್ಟು ₹3,300 ನೀಡಬೇಕು," ಎಂದು ಸೂಚನೆ ನೀಡಿದರು. ಸಿಎಂ ಅವರ ಈ ಸಲಹೆಗೆ ರೈತ ಪ್ರತಿನಿಧಿಗಳು ಹಾಗೂ ಸಕ್ಕರೆ ಕಾರ್ಖಾನೆ ಮಾಲೀಕರು ಅಂತಿಮವಾಗಿ ಒಪ್ಪಿಗೆ ಸೂಚಿಸಿದರು.
ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಈ ಹೊಸ ದರ ನಿರ್ಧಾರವನ್ನು ದೃಢಪಡಿಸಿದರು. "ಕಬ್ಬು ಬೆಳೆಗಾರರಿಗೆ ನೆರವಾಗಲು ಸಕ್ಕರೆ ಕಾರ್ಖಾನೆ ಮಾಲೀಕರಿಂದ ₹50 ಹಾಗೂ ಸರ್ಕಾರದಿಂದ ₹50 ಸೇರಿಸಿ ಒಟ್ಟಾರೆ ಹೆಚ್ಚುವರಿ ₹100 ನೀಡಲು ನಿರ್ಧರಿಸಲಾಗಿದೆ. ಅದರಂತೆ, ಶೇ. 11.25 ರಷ್ಟು ಇಳುವರಿ ಇರುವ ಪ್ರತಿ ಟನ್ ಕಬ್ಬಿಗೆ ₹3,300 ರೂಪಾಯಿಗಳನ್ನು ರೈತರಿಗೆ ಪಾವತಿಸಲು ಸೂಚಿಸಲಾಗಿದೆ," ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ಈ ದರ ನಿಗದಿಯಿಂದ ಸದ್ಯಕ್ಕೆ ಕಬ್ಬು ಬೆಳೆಗಾರರ ಪ್ರತಿಭಟನೆ ನಿಂತಿದ್ದು, ರೈತರಲ್ಲಿ ಸಮಾಧಾನ ತಂದಿದೆ.






Comments