ಶಿವಮೊಗ್ಗ: ಪೊಲೀಸ್ ಠಾಣೆಯಲ್ಲೇ ಹೆಡ್ ಕಾನ್‌ಸ್ಟೇಬಲ್ ಆತ್ಮಹತ್ಯೆ
- sathyapathanewsplu
- Jan 8
- 1 min read

ಶಿವಮೊಗ್ಗದಲ್ಲಿ ಪೊಲೀಸ್ ಹೆಡ್ ಕಾನ್‌ಸ್ಟೇಬಲ್ ಒಬ್ಬರು ಪೊಲೀಸ್ ಠಾಣೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭೀತಿಯನ್ನು ಮೂಡಿಸಿದೆ. ಪಶ್ಚಿಮ ಸಂಚಾರ ಠಾಣೆಯ ಹೆಡ್ ಕಾನ್‌ಸ್ಟೇಬಲ್ ಆಗಿದ್ದ ಮುಹಮ್ಮದ್ ಝಕ್ರಿಯಾ (55) ಮೃತಪಟ್ಟವರು. ಕಳೆದ 26 ವರ್ಷಗಳಿಂದ ಇಲಾಖೆಯಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ಇವರು, ಬುಧವಾರ ರಾತ್ರಿ ಕರ್ತವ್ಯ ಮುಗಿಸಿ ಬಂದ ನಂತರ ಠಾಣೆಯ ಹಿಂಭಾಗದ ಸೆಲ್‌ಗಳಿರುವ ಪ್ರದೇಶದಲ್ಲಿ ಈ ಅನಾಹುತ ಮಾಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮೃತ ಮುಹಮ್ಮದ್ ಝಕ್ರಿಯಾ ಅವರು ಸಾವಿಗೂ ಮುನ್ನ ಬರೆದಿರುವ ಡೆತ್ ನೋಟ್ ಲಭ್ಯವಾಗಿದ್ದು, ಅದರಲ್ಲಿ ತಮ್ಮ ಸಹೋದ್ಯೋಗಿಯೊಬ್ಬರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪಶ್ಚಿಮ ಸಂಚಾರ ಠಾಣೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ನಾಸೀರ್ ಅಹಮದ್ (ಹೆಚ್‌ಸಿ 131) ಎಂಬುವವರು ತಮಗೆ ಕಳೆದ ಒಂದು ವರ್ಷದಿಂದ ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ. ಸಾರ್ವಜನಿಕವಾಗಿ ಮತ್ತು ಇತರೆ ಜಿಲ್ಲೆಯ ಸಿಬ್ಬಂದಿಗಳ ಎದುರು ನಾಸೀರ್ ನನ್ನ ಬಗ್ಗೆ ಅಪಪ್ರಚಾರ ಮಾಡಿದ್ದರಿಂದ ನಾನು ಮಾನಸಿಕವಾಗಿ ಮತ್ತು ದೈಹಿಕವಾಗಿ ಜರ್ಜರಿತನಾಗಿದ್ದೇನೆ ಎಂದು ಅವರು ನೋವು ವ್ಯಕ್ತಪಡಿಸಿದ್ದಾರೆ.
ಡೆತ್ ನೋಟ್‌ನಲ್ಲಿ ತಮ್ಮ ಇಲಾಖೆಯ ಗೆಳೆಯರು ಹಾಗೂ ಮೇಲಧಿಕಾರಿಗಳಿಗೆ ನಮಸ್ಕರಿಸಿರುವ ಝಕ್ರಿಯಾ ಅವರು, ನಾಸೀರ್ ನನ್ನ ಕರ್ತವ್ಯದ ವಿಚಾರದಲ್ಲೂ ಮೇಡಂಗಳ ಬಳಿ ಹೀಯಾಳಿಸಿ ಮಾತನಾಡುತ್ತಿದ್ದರು ಎಂದು ದೂರಿದ್ದಾರೆ. "ನನ್ನ ಸಾವಿಗೆ ನಾಸೀರ್ ಅಹ್ಮದ್ ಅವರೇ ನೇರ ಕಾರಣ" ಎಂದು ಸ್ಪಷ್ಟವಾಗಿ ಬರೆದಿಟ್ಟು ಅವರು ಜೀವನ ಅಂತ್ಯಗೊಳಿಸಿದ್ದಾರೆ. ಈ ಘಟನೆಯು ಪೊಲೀಸ್ ಇಲಾಖೆಯಲ್ಲಿನ ಆಂತರಿಕ ಕಿರುಕುಳದ ಗಂಭೀರತೆಯನ್ನು ಎತ್ತಿ ತೋರಿಸಿದ್ದು, ಇಲಾಖೆಯು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದೆ.





Comments