ಫೆಬ್ರವರಿ 1ರಿಂದ ಸಿಗರೇಟ್, ಪಾನ್ ಮಸಾಲಾ ದುಬಾರಿ: ಕೇಂದ್ರ ಸರ್ಕಾರದಿಂದ ಹೊಸ ತೆರಿಗೆ ಅಧಿಸೂಚನೆ
- sathyapathanewsplu
- Jan 2
- 1 min read

ಹೊಸ ವರ್ಷದ ಆರಂಭದಲ್ಲೇ ತಂಬಾಕು ಪ್ರಿಯರಿಗೆ ಕೇಂದ್ರ ಸರ್ಕಾರ ಬಿಗ್ ಶಾಕ್ ನೀಡಿದೆ. ಫೆಬ್ರವರಿ 1 ರಿಂದ ಜಾರಿಗೆ ಬರುವಂತೆ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಈ ಹೊಸ ಸುಂಕಗಳು ಪ್ರಸ್ತುತ ಇರುವ ಜಿಎಸ್‌ಟಿ ದರಕ್ಕಿಂತ ಹೆಚ್ಚಿರಲಿದ್ದು, ಇಲ್ಲಿಯವರೆಗೆ ವಿಧಿಸಲಾಗುತ್ತಿದ್ದ ಜಿಎಸ್‌ಟಿ ಪರಿಹಾರ ಸೆಸ್ (Compensation Cess) ಅನ್ನು ಇವು ಬದಲಾಯಿಸಲಿವೆ ಎಂದು ಹಣಕಾಸು ಸಚಿವಾಲಯ ಸ್ಪಷ್ಟಪಡಿಸಿದೆ.
ಸರ್ಕಾರದ ಹೊಸ ನಿಯಮದಂತೆ, ಫೆಬ್ರವರಿ 1 ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಅಂತಹ ಇತರ ಉತ್ಪನ್ನಗಳಿಗೆ ಒಟ್ಟು ಶೇ. 40 ರಷ್ಟು ಜಿಎಸ್‌ಟಿ ದರ ಅನ್ವಯವಾಗಲಿದೆ. ಆದರೆ, ಬೀಡಿಗಳ ಮೇಲಿನ ಜಿಎಸ್‌ಟಿ ದರವನ್ನು ಶೇ. 18 ಕ್ಕೆ ನಿಗದಿಪಡಿಸಲಾಗಿದೆ. ಇದರೊಂದಿಗೆ ಪಾನ್ ಮಸಾಲಾದ ಮೇಲೆ 'ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್' ಅನ್ನು ಪ್ರತ್ಯೇಕವಾಗಿ ವಿಧಿಸಲಾಗುತ್ತದೆ. ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕವನ್ನು ವಿಧಿಸುವ ಮೂಲಕ ಅವುಗಳ ಬೆಲೆ ಏರಿಕೆಗೆ ಸರ್ಕಾರ ಮುಂದಾಗಿದೆ.
ಈ ತೆರಿಗೆ ಬದಲಾವಣೆಯ ಜೊತೆಗೆ, ಚೂಯಿಂಗ್ ತಂಬಾಕು, ಜರ್ದಾ ಸುಗಂಧಿತ ತಂಬಾಕು ಮತ್ತು ಗುಟ್ಕಾ ತಯಾರಿಕಾ ಘಟಕಗಳ ಮೇಲೆ ಕಠಿಣ ನಿಗಾ ವಹಿಸಲು ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 'ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಣಯ ಮತ್ತು ಸುಂಕ ಸಂಗ್ರಹ) ನಿಯಮಗಳು-2026' ಅನ್ನು ಹೊರಡಿಸಲಾಗಿದೆ. ಉತ್ಪಾದನಾ ಸಾಮರ್ಥ್ಯದ ಆಧಾರದ ಮೇಲೆ ತೆರಿಗೆ ಸಂಗ್ರಹಿಸುವುದು ಮತ್ತು ತೆರಿಗೆ ಸೋರಿಕೆಯನ್ನು ತಡೆಗಟ್ಟುವುದು ಈ ಹೊಸ ನಿಯಮಗಳ ಮುಖ್ಯ ಉದ್ದೇಶವಾಗಿದೆ. ಇದರಿಂದಾಗಿ ಮುಂದಿನ ತಿಂಗಳಿನಿಂದ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ತಂಬಾಕು ಉತ್ಪನ್ನಗಳ ಬೆಲೆ ಗಣನೀಯವಾಗಿ ಏರಿಕೆಯಾಗುವುದು ಖಚಿತವಾಗಿದೆ.





Comments