ಮಾಜಿ ಪ್ರೇಯಸಿಗೆ ಬರ್ತ್‌ಡೇ ಮೆಸೇಜ್ ಕಳುಹಿಸಿದ್ದೇ ತಪ್ಪಾಯ್ತು: ಯುವಕನ ಬರ್ಬರ ಹತ್ಯೆ!
- sathyapathanewsplu
- Jan 2
- 1 min read

ತರೀಕೆರೆ: ಪ್ರೀತಿಸಿ ದೂರಾಗಿದ್ದ ಮಾಜಿ ಪ್ರೇಯಸಿಗೆ ಹುಟ್ಟುಹಬ್ಬದ ಶುಭಾಶಯ ಕೋರಿ ಸಂದೇಶ ಕಳುಹಿಸಿದ ಕಾರಣಕ್ಕೆ ಯುವಕನೋರ್ವನನ್ನು ಚೂರಿಯಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅತ್ತಿಗನಾಲು ಗ್ರಾಮದಲ್ಲಿ ನಡೆದಿದೆ. ಉಡೇವಾ ಗ್ರಾಮದ ನಿವಾಸಿ ಮಂಜುನಾಥ್ (28) ಕೊಲೆಯಾದ ದುರ್ದೈವಿ. ಈ ಸಂಬಂಧ ಮೃತನ ಮೇಲೆ ಹಲ್ಲೆ ನಡೆಸಿದ ಕಿರಣ್, ವೇಣು, ಅಪ್ಪು ಮತ್ತು ಮನು ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿದೆ.
ಹತ್ಯೆಗೀಡಾದ ಮಂಜುನಾಥ್ ಮತ್ತು ಆರೋಪಿ ಕಿರಣ್‌ನ ಸಹೋದರಿ ಈ ಹಿಂದೆ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇವರ ಪ್ರೀತಿಯ ವಿಚಾರ ತಿಳಿದ ಪೋಷಕರು ಯುವತಿಗೆ ಬೇರೊಬ್ಬ ಯುವಕನೊಂದಿಗೆ ಮದುವೆ ನಿಶ್ಚಯ ಮಾಡಿದ್ದರು. ಅಲ್ಲದೆ, ತನ್ನ ಸಹೋದರಿಯಿಂದ ದೂರವಿರುವಂತೆ ಕಿರಣ್ ಈ ಹಿಂದೆಯೇ ಮಂಜುನಾಥ್‌ಗೆ ಎಚ್ಚರಿಕೆ ನೀಡಿದ್ದನು. ಆದರೆ, ನಿನ್ನೆ ಯುವತಿಯ ಹುಟ್ಟುಹಬ್ಬವಿದ್ದ ಕಾರಣ ಮಂಜುನಾಥ್ ಇನ್‌ಸ್ಟಾಗ್ರಾಮ್ ಮೂಲಕ ಶುಭಾಶಯದ ಸಂದೇಶ ಕಳುಹಿಸಿದ್ದು, ಇದು ಆರೋಪಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಸಂದೇಶದ ವಿಷಯವಾಗಿ ಮಾತನಾಡಬೇಕೆಂದು ಮಂಜುನಾಥ್‌ನನ್ನು ಅತ್ತಿಗನಾಲು ಅಂಡರ್‌ಪಾಸ್ ಬಳಿ ಕರೆಸಿಕೊಂಡ ಕಿರಣ್ ಮತ್ತು ಆತನ ಸ್ನೇಹಿತರು ಜಗಳ ತೆಗೆದಿದ್ದಾರೆ. ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ಹೋದಾಗ, ಕಿರಣ್ ತನ್ನ ಬಳಿಯಿದ್ದ ಚಾಕುವಿನಿಂದ ಮಂಜುನಾಥ್‌ಗೆ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವದಿಂದ ಗಂಭೀರವಾಗಿ ಗಾಯಗೊಂಡಿದ್ದ ಮಂಜುನಾಥ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಎಸ್ಪಿ ವಿಕ್ರಮ್ ಅಮಠೆ ಅವರು ಪ್ರಕರಣ ದಾಖಲಿಸಿಕೊಂಡಿದ್ದು, ಎಲ್ಲಾ ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ತಿಳಿಸಿದ್ದಾರೆ.





Comments