ಮಂಗಳೂರು ಮೂಲದ ಟೆಕ್ಕಿ ಶರ್ಮಿಳಾ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು: ಲೈಂಗಿಕ ದೌರ್ಜನ್ಯಕ್ಕೆ ನಿರಾಕರಿಸಿದ್ದಕ್ಕೆ ಕೊಲೆಗೈದು ಬೆಂಕಿ ಹಚ್ಚಿದ್ದ ನೆರೆಮನೆಯ ಯುವಕ ಅರೆಸ್ಟ್!
- sathyapathanewsplu
- Jan 12
- 1 min read

ಬೆಂಗಳೂರಿನಲ್ಲಿ ನಡೆದಿದ್ದ ಮಂಗಳೂರು ಮೂಲದ ಮಹಿಳಾ ಟೆಕ್ಕಿ ಶರ್ಮಿಳಾ ಅವರ ನಿಗೂಢ ಸಾವಿನ ಪ್ರಕರಣಕ್ಕೆ ಈಗ ಆಘಾತಕಾರಿ ತಿರುವು ಸಿಕ್ಕಿದ್ದು, ಇದೊಂದು ವ್ಯವಸ್ಥಿತ ಕೊಲೆ ಎಂಬುದು ಪೊಲೀಸರ ತನಿಖೆಯಿಂದ ಬಯಲಾಗಿದೆ. ಜನವರಿ 3ರಂದು ರಾಮಮೂರ್ತಿನಗರದ ಫ್ಲಾಟ್‌ನಲ್ಲಿ ನಡೆದಿದ್ದ ಬೆಂಕಿ ಅವಘಡದಲ್ಲಿ ಶರ್ಮಿಳಾ ಮೃತಪಟ್ಟಿದ್ದರು. ಮೊದಲು ಇದನ್ನು ಶಾರ್ಟ್ ಸರ್ಕ್ಯೂಟ್ ಎಂದು ಶಂಕಿಸಲಾಗಿತ್ತಾದರೂ, ಮೃತರ ಸ್ನೇಹಿತರು ವ್ಯಕ್ತಪಡಿಸಿದ ಅನುಮಾನದ ಮೇರೆಗೆ ತನಿಖೆ ನಡೆಸಿದ ಪೊಲೀಸರು ನೆರೆಮನೆಯ 18 ವರ್ಷದ ಯುವಕನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕೇರಳ ಮೂಲದ ಪಿಯುಸಿ ವಿದ್ಯಾರ್ಥಿ ಕರ್ಣಲ್ ಕುರೈ ಎಂಬಾತ ಅಂದು ರಾತ್ರಿ ಕಿಟಕಿಯ ಮೂಲಕ ಶರ್ಮಿಳಾ ಅವರ ಫ್ಲಾಟ್‌ಗೆ ನುಗ್ಗಿದ್ದ. ಲೈಂಗಿಕವಾಗಿ ಸಹಕರಿಸಲು ನಿರಾಕರಿಸಿದಾಗ ಆಕ್ರೋಶಗೊಂಡ ಯುವಕ, ಆಕೆಯ ಬಾಯಿ ಮತ್ತು ಮೂಗನ್ನು ಬಲವಾಗಿ ಒತ್ತಿ ಹಿಡಿದು ಅರೆ ಪ್ರಜ್ಞಾವಸ್ಥೆಗೆ ತಂದಿದ್ದ. ಈ ವೇಳೆ ನಡೆದ ಸಂಘರ್ಷದಲ್ಲಿ ಶರ್ಮಿಳಾ ಅವರಿಗೆ ತೀವ್ರ ರಕ್ತಸ್ರಾವವಾಗಿತ್ತು. ನಂತರ ಸಾಕ್ಷ್ಯಗಳನ್ನು ನಾಶಪಡಿಸುವ ಉದ್ದೇಶದಿಂದ ಆರೋಪಿಯು ಮನೆಯಲ್ಲಿದ್ದ ಬಟ್ಟೆಗಳಿಗೆ ಬೆಂಕಿ ಹಚ್ಚಿ, ಆಕೆಯ ಮೊಬೈಲ್ ಫೋನಿನೊಂದಿಗೆ ಪರಾರಿಯಾಗಿದ್ದ.
ಪ್ರಕರಣದ ಬೆನ್ನತ್ತಿದ ಬೆಂಗಳೂರು ಪೊಲೀಸರು ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇಲೆ ಆರೋಪಿಯನ್ನು ಆತನ ಮನೆಯಲ್ಲೇ ಬಂಧಿಸಿದ್ದಾರೆ. ಶರ್ಮಿಳಾ ಅವರು ಖ್ಯಾತ ಐಟಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು, ಘಟನೆ ನಡೆದ ಸಮಯದಲ್ಲಿ ಅವರ ರೂಮ್‌ಮೇಟ್ ಊರಿನಲ್ಲಿ ಇರಲಿಲ್ಲ. ಈ ಸಂದರ್ಭವನ್ನೇ ಬಳಸಿಕೊಂಡ ಆರೋಪಿ ಕೃತ್ಯ ಎಸಗಿದ್ದಾನೆ. ಸದ್ಯ ಆರೋಪಿಯನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದ್ದು, ರಾಮಮೂರ್ತಿ ನಗರ ಠಾಣೆಯಲ್ಲಿ ಹೆಚ್ಚಿನ ವಿಚಾರಣೆ ಮುಂದುವರಿದಿದೆ.





Comments