ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಕ್ತರ ಮಹಾಪೂರ: ನಾಲ್ಕು ದಿನಗಳಲ್ಲಿ 2 ಲಕ್ಷಕ್ಕೂ ಅಧಿಕ ಭೇಟಿ
- sathyapathanewsplu
- 2 days ago
- 1 min read

ಸುಬ್ರಹ್ಮಣ್ಯ: ದಕ್ಷಿಣ ಭಾರತದ ಪವಿತ್ರ ನಾಗಾರಾಧನಾ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಸರಣಿ ರಜೆಗಳ ಹಿನ್ನೆಲೆಯಲ್ಲಿ ಭಕ್ತ ಸಾಗರವೇ ಹರಿದುಬಂದಿದೆ. ಕಳೆದ ನಾಲ್ಕು ದಿನಗಳಲ್ಲಿ ಹಗಲು-ರಾತ್ರಿ ಎನ್ನದೆ ಸುಮಾರು ಎರಡು ಲಕ್ಷಕ್ಕೂ ಅಧಿಕ ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ಈ ಭಾರಿ ಭೇಟಿಯಿಂದಾಗಿ ದೇವಸ್ಥಾನದ ಹುಂಡಿ, ವಿವಿಧ ಸೇವೆಗಳು, ಅನ್ನದಾನ ದೇಣಿಗೆ, ವಸತಿ ಛತ್ರಗಳ ಬಾಡಿಗೆ ಹಾಗೂ ಹರಿಕೆ ರೂಪದ ಚಿನ್ನ-ಬೆಳ್ಳಿಯ ದೇಣಿಗೆ ಸೇರಿದಂತೆ ಒಟ್ಟು ಆದಾಯವು ನಾಲ್ಕು ಕೋಟಿ ರೂಪಾಯಿಗಳನ್ನೂ ಮೀರಲಿದೆ ಎಂದು ಅಂದಾಜಿಸಲಾಗಿದೆ.
ಭಕ್ತರ ಸಂಖ್ಯೆ ಗಣನೀಯವಾಗಿ ಏರಿಕೆಯಾದ ಕಾರಣ, ಕ್ಷೇತ್ರದ ಅನ್ನಪ್ರಸಾದ ವ್ಯವಸ್ಥೆಯಲ್ಲಿ ವಿಶೇಷ ಬದಲಾವಣೆಗಳನ್ನು ಮಾಡಲಾಗಿತ್ತು. ಮುಖ್ಯ ಅನ್ನಪ್ರಸಾದ ಭೋಜನ ಶಾಲೆಯ ಜೊತೆಗೆ ಆದಿ ಸುಬ್ರಹ್ಮಣ್ಯದ ಭೋಜನ ಶಾಲೆಯಲ್ಲಿಯೂ ಬಫೆ ವ್ಯವಸ್ಥೆಯನ್ನು ಕಲ್ಪಿಸುವ ಮೂಲಕ ಸಾವಿರಾರು ಭಕ್ತರಿಗೆ ಯಾವುದೇ ಅಡೆತಡೆಯಿಲ್ಲದೆ ಶಿಸ್ತುಬದ್ಧವಾಗಿ ಅನ್ನದಾನ ವಿತರಿಸಲಾಯಿತು. ಅತಿಯಾದ ವಾಹನ ದಟ್ಟಣೆಯನ್ನು ನಿಯಂತ್ರಿಸಲು ರಥಬೀದಿ ಮತ್ತು ಪಾರ್ಕಿಂಗ್ ವಲಯಗಳಲ್ಲಿ ಹೆಚ್ಚಿನ ಪೊಲೀಸ್ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿ ಸಂಚಾರ ಸುಗಮಗೊಳಿಸಲಾಯಿತು.
ಕ್ಷೇತ್ರದ ಕಾರ್ಯನಿರ್ವಹಣಾ ಅಧಿಕಾರಿಗಳಾದ ಅರವಿಂದ ಅಯ್ಯಪ್ಪ ಸುತಗುಂಡಿ ಹಾಗೂ ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿ ಯೇಸುರಾಜ್ ಅವರು ಸ್ವತಃ ಸ್ಥಳದಲ್ಲಿ ಹಾಜರಿದ್ದು ಭಕ್ತರ ದರ್ಶನ ವ್ಯವಸ್ಥೆಯನ್ನು ಮೇಲ್ವಿಚಾರಣೆ ಮಾಡಿದರು. ದೇವಳದ ಒಳಾಂಗಣ ಮತ್ತು ಪ್ರವೇಶ ದ್ವಾರಗಳಲ್ಲಿ ನಿಗದಿತ ಸಾಲುಗಳ ವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಮೂಲಕ ಸಿಬ್ಬಂದಿ ತಂಡವು ಭಕ್ತರಿಗೆ ಸುಗಮ ದರ್ಶನಕ್ಕೆ ಅನುವು ಮಾಡಿಕೊಟ್ಟಿತು. ಸರಣಿ ರಜೆಗಳ ಈ ಸಂದರ್ಭದಲ್ಲಿ ಕುಕ್ಕೆ ಕ್ಷೇತ್ರವು ದಾಖಲೆ ಮಟ್ಟದ ಜನಸ್ತೋಮಕ್ಕೆ ಸಾಕ್ಷಿಯಾಗಿದೆ.






Comments