ಕೆಂಪುಕೋಟೆ ಸ್ಫೋಟ ಪ್ರಕರಣ: ‘ಘೋಸ್ಟ್’ ಸಿಮ್ ಹಾಗೂ ಎನ್‌ಕ್ರಿಪ್ಟ್ ಆ್ಯಪ್ ಬಳಸಿ ಪಾಕ್ ಏಜೆಂಟ್‌ಗಳೊಂದಿಗೆ ಸಂಪರ್ಕ
- sathyapathanewsplu
- Jan 5
- 1 min read

ನವೆಂಬರ್ 10ರಂದು ನಡೆದ ಕೆಂಪುಕೋಟೆ ಬಾಂಬ್ ಸ್ಫೋಟ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಮಾಹಿತಿ ಹೊರಬಿದ್ದಿದ್ದು, ಆರೋಪಿಗಳು ಪಾಕಿಸ್ತಾನದ ಗುಪ್ತಚರ ಏಜೆಂಟ್‌ಗಳನ್ನು ಸಂಪರ್ಕಿಸಲು ‘ಘೋಸ್ಟ್’ ಸಿಮ್ ಕಾರ್ಡ್‌ಗಳು ಮತ್ತು ಎನ್‌ಕ್ರಿಪ್ಟ್ ಮಾಡಲಾದ ಸಂವಹನ ಆ್ಯಪ್‌ಗಳನ್ನು ಬಳಸುತ್ತಿದ್ದರೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಮುಝಮ್ಮಿಲ್ ಗ್ಯಾನೀ ಮತ್ತು ಅದೀಲ್ ರಾರ್ಥ ಸೇರಿದಂತೆ ಬಂಧಿತ ಆರೋಪಿಗಳು ಭದ್ರತಾ ಸಂಸ್ಥೆಗಳ ಕಣ್ತಪ್ಪಿಸಲು ‘ಡ್ಯುಯಲ್ ಫೋನ್’ ತಂತ್ರವನ್ನು ಅನುಸರಿಸುತ್ತಿದ್ದರು. ಈ ಜಾಲದಲ್ಲಿ ಉನ್ನತ ಶಿಕ್ಷಣ ಪಡೆದ ವೈದ್ಯರು ಕೂಡ ಭಾಗಿಯಾಗಿರುವುದು ತನಿಖೆಯಿಂದ ದೃಢಪಟ್ಟಿದೆ.
ತನಿಖಾ ವರದಿಯ ಪ್ರಕಾರ, ಪ್ರತಿಯೊಬ್ಬ ಆರೋಪಿಯೂ ಎರಡು ಅಥವಾ ಮೂರು ಮೊಬೈಲ್ ಫೋನ್‌ಗಳನ್ನು ಹೊಂದಿದ್ದು, ತಮ್ಮ ದೈನಂದಿನ ಕೆಲಸಗಳಿಗೆ ಸ್ವಂತ ಹೆಸರಿನ ಸಿಮ್ ಬಳಸುತ್ತಿದ್ದರು. ಆದರೆ, ‘ಉಕಾಸ’, ‘ಫೈಝಾನ್’ ಮತ್ತು ‘ಹಶ್ಮಿ’ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪಾಕಿಸ್ತಾನಿ ಏಜೆಂಟ್‌ಗಳನ್ನು ಸಂಪರ್ಕಿಸಲು ಅಂತರ್ಜಾಲದ ಮೂಲಕ ಪಡೆದ ‘ಘೋಸ್ಟ್’ ಸಿಮ್‌ಗಳನ್ನು ಬಳಸುತ್ತಿದ್ದರು. ಮುಗ್ದ ನಾಗರಿಕರ ಆಧಾರ್ ವಿವರಗಳನ್ನು ದುರ್ಬಳಕೆ ಮಾಡಿಕೊಂಡು ಈ ಸಿಮ್‌ಗಳನ್ನು ಪಡೆಯಲಾಗಿತ್ತು. ಈ ಸಂಬಂಧ ನಕಲಿ ದಾಖಲೆ ಬಳಸಿ ಸಿಮ್ ವಿತರಿಸುತ್ತಿದ್ದ ಜಾಲವನ್ನು ಜಮ್ಮು-ಕಾಶ್ಮೀರ ಪೊಲೀಸರು ಪತ್ತೆಹಚ್ಚಿದ್ದಾರೆ.
ಈ ಬೆಳವಣಿಗೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ದೂರಸಂಪರ್ಕ ಇಲಾಖೆಯು ಕಳೆದ ನವೆಂಬರ್ 28ರಂದು ಮಹತ್ವದ ನಿರ್ದೇಶನವೊಂದನ್ನು ಹೊರಡಿಸಿದೆ. ವಾಟ್ಸ್ಆ್ಯಪ್, ಟೆಲಿಗ್ರಾಮ್ ಮತ್ತು ಸಿಗ್ನಲ್‌ನಂತಹ ಆ್ಯಪ್ ಆಧಾರಿತ ಸಂವಹನ ಸೇವೆಗಳು ಮೊಬೈಲ್ ಫೋನ್‌ನಲ್ಲಿರುವ ಭೌತಿಕ ಸಿಮ್ ಕಾರ್ಡ್‌ಗೆ ನಿರಂತರವಾಗಿ ಸಂಪರ್ಕ ಹೊಂದಿರಬೇಕು ಎಂದು ಸೂಚಿಸಿದೆ. ಡಿಜಿಟಲ್ ಸಂವಹನದ ಮೂಲಕ ನಡೆಯುವ ಇಂತಹ ದೇಶದ್ರೋಹಿ ಚಟುವಟಿಕೆಗಳಿಗೆ ಲಗಾಮು ಹಾಕಲು ಸರ್ಕಾರ ಈ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.





Comments