ಗಡಿಯಲ್ಲಿ ಪಾಕಿಸ್ತಾನದ ಕುತಂತ್ರ: ಜಮ್ಮು-ಕಾಶ್ಮೀರದಲ್ಲಿ ಡ್ರೋನ್‌ಗಳನ್ನು ಹೊಡೆದುರುಳಿಸಿದ ಭಾರತೀಯ ಸೇನೆ
- sathyapathanewsplu
- Jan 12
- 1 min read

ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ (LoC) ಬಳಿ ಪಾಕಿಸ್ತಾನದ ಡ್ರೋನ್ ಹಾವಳಿ ಮತ್ತೆ ಮುಂದುವರಿದಿದ್ದು, ಭಾನುವಾರ ರಾತ್ರಿ ಭಾರತೀಯ ಸೇನೆಯು ಯಶಸ್ವಿ ಕಾರ್ಯಾಚರಣೆ ನಡೆಸಿದೆ. ನೌಶೇರಾ ಸೆಕ್ಟರ್‌ನಲ್ಲಿ ಗಡಿ ದಾಟಿ ಬಂದ ಪಾಕಿಸ್ತಾನಿ ಡ್ರೋನ್‌ಗಳನ್ನು ಗುರ್ತಿಸಿದ ಸೇನಾ ಪಡೆಗಳು, ತಕ್ಷಣವೇ ಮೆಷಿನ್ ಗನ್‌ಗಳ ಮೂಲಕ ಗುಂಡು ಹಾರಿಸಿ ಅವುಗಳನ್ನು ಹೊಡೆದುರುಳಿಸಿವೆ. 'ಆಪರೇಷನ್ ಸಿಂಧೂರ'ದ ಸಮಯದಲ್ಲಿ ಕಂಡುಬಂದಿದ್ದ ಹಾರಾಟದ ಮಾದರಿಯಲ್ಲೇ ಈ ಡ್ರೋನ್‌ಗಳು ಕೂಡ ಸಂಚರಿಸುತ್ತಿರುವುದು ಕಂಡುಬಂದಿದೆ.
ರಾಜೌರಿ ಜಿಲ್ಲೆಯ ನೌಶೇರಾ ಮಾತ್ರವಲ್ಲದೆ, ಸಾಂಬಾ ಸೆಕ್ಟರ್‌ನಲ್ಲಿಯೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ದಿಕ್ಕಿನಿಂದ ಬಂದ ಡ್ರೋನ್ ಒಂದು ಶಸ್ತ್ರಾಸ್ತ್ರಗಳ ಸರಕನ್ನು ಕೆಳಕ್ಕೆ ಬೀಳಿಸಿದೆ ಎಂದು ಸೇನಾ ಮೂಲಗಳು ಖಚಿತಪಡಿಸಿವೆ. ಸಂಜೆ 6:35ರ ಸುಮಾರಿಗೆ ರಾಜೌರಿಯಲ್ಲಿ ಮೊದಲ ಡ್ರೋನ್ ಕಾಣಿಸಿಕೊಂಡರೆ, ನಂತರ 7:15ರ ವೇಳೆಗೆ ಸಾಂಬಾದ ರಾಮಗಢ ಸೆಕ್ಟರ್‌ನ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಶಂಕಿತ ವಸ್ತುವೊಂದು ಸುಳಿದಾಡಿತ್ತು. ಗಡಿ ಭಾಗದಲ್ಲಿ ಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರ ಅಥವಾ ಮಾದಕವಸ್ತುಗಳನ್ನು ಪೂರೈಸುವ ಪಾಕಿಸ್ತಾನದ ಸಂಚನ್ನು ಈ ಮೂಲಕ ವಿಫಲಗೊಳಿಸಲಾಗಿದೆ.
ಪ್ರಸ್ತುತ, ಹೊಡೆದುರುಳಿಸಲಾದ ಡ್ರೋನ್‌ಗಳು ಎಲ್ಲಿ ಬಿದ್ದಿವೆ ಮತ್ತು ಅವುಗಳು ಸ್ಫೋಟಕಗಳು ಅಥವಾ ಅಕ್ರಮ ಹಣವನ್ನು ಸಾಗಿಸುತ್ತಿದ್ದವೇ ಎಂಬ ಬಗ್ಗೆ ಸೇನೆಯು ತೀವ್ರ ಶೋಧ ಕಾರ್ಯಾಚರಣೆ ನಡೆಸುತ್ತಿದೆ. ಗಡಿ ಭಾಗದ ಹಳ್ಳಿಗಳಲ್ಲಿ ಹದ್ದಿನ ಕಣ್ಣಿಡಲಾಗಿದ್ದು, ಯಾವುದೇ ಅನುಮಾನಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ತಕ್ಷಣ ಮಾಹಿತಿ ನೀಡುವಂತೆ ಸ್ಥಳೀಯರಿಗೆ ಸೂಚಿಸಲಾಗಿದೆ. ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಘೋಷಿಸಿವೆ.





Comments