ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಟಿಕೆಟ್: ಸಾರ್ವಜನಿಕರಿಗೆ ಅವಕಾಶ
- sathyapathanewsplu
- Jan 8
- 1 min read

ನವದೆಹಲಿ: 77ನೇ ಗಣರಾಜ್ಯೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಜನವರಿ 26ರಂದು ನಡೆಯಲಿರುವ ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಅವಕಾಶ ನೀಡಿದೆ. ಈ ಸಂಬಂಧ ಟಿಕೆಟ್ ಮಾರಾಟ ಈಗಾಗಲೇ ಆರಂಭವಾಗಿದ್ದು, ಪ್ರತಿದಿನ 2,225 ಟಿಕೆಟ್‌ಗಳನ್ನು ಬಿಡುಗಡೆ ಮಾಡಲಾಗುತ್ತಿದೆ.
ಜನವರಿ 5ರಿಂದ ಟಿಕೆಟ್ ಮಾರಾಟ ಆರಂಭವಾಗಿದ್ದು, ಜನವರಿ 14 ಟಿಕೆಟ್ ಪಡೆಯಲು ಕೊನೆಯ ದಿನವಾಗಿದೆ. ಗಣರಾಜ್ಯೋತ್ಸವ ಪರೇಡ್ ವೀಕ್ಷಣೆಗೆ ರೂ.100 ಮತ್ತು ರೂ.20 ದರದ ಟಿಕೆಟ್‌ಗಳನ್ನು ನಿಗದಿಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರೇಡ್ ಜೊತೆಗೆ ಗಣರಾಜ್ಯೋತ್ಸವದ ಅಂಗವಾಗಿ ಜನವರಿ 28ರಂದು ನಡೆಯುವ ‘ಬೀಟಿಂಗ್ ದ ರಿಟ್ರೀಟ್’ ಸಮವಸ್ತ್ರ ಸಹಿತ ಪೂರ್ವಾಭ್ಯಾಸ ಹಾಗೂ ಜನವರಿ 29ರಂದು ನಡೆಯುವ ‘ಬೀಟಿಂಗ್ ದ ರಿಟ್ರೀಟ್’ ಮುಖ್ಯ ಸಮಾರಂಭ ವೀಕ್ಷಣೆಯಕ್ಕೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ಪೂರ್ವಾಭ್ಯಾಸ ವೀಕ್ಷಣೆಗೆ ರೂ.20 ಹಾಗೂ ಮುಖ್ಯ ಸಮಾರಂಭ ವೀಕ್ಷಣೆಗೆ ರೂ.100 ಟಿಕೆಟ್ ದರ ನಿಗದಿಯಾಗಿದೆ.
‘ಬೀಟಿಂಗ್ ದ ರಿಟ್ರೀಟ್’ ಕಾರ್ಯಕ್ರಮದಲ್ಲಿ ಭಾರತೀಯ ಸೇನೆ, ನೌಕಾಪಡೆ, ವಾಯುಪಡೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಂಗೀತ ಬ್ಯಾಂಡ್‌ಗಳು ಪಾಲ್ಗೊಂಡು, ಭಾರತದಲ್ಲಿ ಅಸ್ತಿತ್ವದಲ್ಲಿರುವ 31 ರಾಗಗಳನ್ನು ನುಡಿಸಲಿವೆ. ಈ ಸಮಾರಂಭವು ಗಣರಾಜ್ಯೋತ್ಸವ ಆಚರಣೆಯ ಅಂತ್ಯವನ್ನು ಸೂಚಿಸುವ ಸಾಂಪ್ರದಾಯಿಕ ಸೈನಿಕ ವಿಧಿಯಾಗಿದೆ.
ಟಿಕೆಟ್‌ಗಳನ್ನು ಸರ್ಕಾರದ ಅಧಿಕೃತ http://www.aamantran.mod.gov.in ವೆಬ್‌ಸೈಟ್ ಮೂಲಕ ಪಡೆಯಬಹುದಾಗಿದೆ. ಆಸಕ್ತರು ವೆಬ್‌ಸೈಟ್‌ಗೆ ಭೇಟಿ ನೀಡಿ ಹೆಸರು, ಇ–ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ಓಟಿಪಿ ದೃಢೀಕರಣದ ಬಳಿಕ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ವೀಕ್ಷಿಸಲು ಬಯಸುವ ಕಾರ್ಯಕ್ರಮವನ್ನು ಆಯ್ಕೆ ಮಾಡಬಹುದು.
ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ಟಿಕೆಟ್ ಮಾರಾಟ ಆರಂಭವಾಗಲಿದ್ದು, ಅಂದಿನ ಕೋಟಾ ಮುಗಿಯುವವರೆಗೆ ಮಾರಾಟ ಮುಂದುವರೆಯಲಿದೆ.





Comments