ಫೆಬ್ರವರಿ 1ರ ಭಾನುವಾರವೇ ಕೇಂದ್ರ ಬಜೆಟ್ ಮಂಡನೆ ಸಾಧ್ಯತೆ: ಇತಿಹಾಸದಲ್ಲೇ ಮೊದಲ ಬಾರಿ ಇಂತಹದೊಂದು ನಿರ್ಧಾರ!
- sathyapathanewsplu
- Jan 7
- 1 min read

ಹೊಸದಿಲ್ಲಿ: ಮುಂದಿನ 2026-27ರ ಹಣಕಾಸು ವರ್ಷದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1ರಂದು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸುತ್ತಿದೆ. ವಿಶೇಷವೆಂದರೆ, ಬಜೆಟ್ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಭಾನುವಾರದಂದು ಈ ಆಯವ್ಯಯ ಮಂಡನೆಯಾಗುತ್ತಿದೆ. ಬಜೆಟ್ ಅಧಿವೇಶನವು ಜನವರಿ 28ರಂದು ರಾಷ್ಟ್ರಪತಿಗಳ ಭಾಷಣದೊಂದಿಗೆ ಆರಂಭವಾಗಲಿದ್ದು, ಸಂಸದೀಯ ವ್ಯವಹಾರಗಳ ಕುರಿತ ಸಂಪುಟ ಸಮಿತಿಯು (CCPA) ಬುಧವಾರದ ಸಭೆಯಲ್ಲಿ ಈ ಕುರಿತು ಅಂತಿಮ ಮೊಹರು ಒತ್ತಲಿದೆ ಎಂದು ತಿಳಿದುಬಂದಿದೆ.
೨೦೧೭ರಿಂದೀಚೆಗೆ ಬಜೆಟ್ ಅನ್ನು ಫೆಬ್ರವರಿ 1ರ ಬೆಳಿಗ್ಗೆ 11 ಗಂಟೆಗೆ ಮಂಡಿಸುವ ಸಂಪ್ರದಾಯವನ್ನು ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆರಂಭಿಸಿದ್ದರು. ಈ ಬಾರಿ ಫೆಬ್ರವರಿ 1 ಭಾನುವಾರವಾಗಿದ್ದರೂ, ಸರ್ಕಾರವು ಈ ಹಿಂದಿನ ಸಂಪ್ರದಾಯವನ್ನೇ ಮುಂದುವರಿಸಲು ನಿರ್ಧರಿಸಿದೆ. ಅಂದು 'ಗುರು ರವಿದಾಸ್ ಜಯಂತಿ'ಯ ಹಿನ್ನೆಲೆಯಲ್ಲಿ ನಿರ್ಬಂಧಿತ ರಜಾದಿನವಾಗಿದ್ದು, ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆ ಮುಚ್ಚಿರುತ್ತವೆ. ಆದರೂ ಸಂಸತ್ತಿನ ಕಲಾಪಕ್ಕೆ ಯಾವುದೇ ಅಡ್ಡಿಯಿಲ್ಲ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಜನವರಿ 29ರಂದು ದೇಶದ ಆರ್ಥಿಕ ಸಮೀಕ್ಷೆಯನ್ನು ಪ್ರಕಟಿಸಲಾಗುತ್ತದೆ. ತದನಂತರ ಜನವರಿ 30 ಮತ್ತು 31ರಂದು ರಜಾದಿನಗಳಿರಲಿದ್ದು, ನೇರವಾಗಿ ಫೆಬ್ರವರಿ 1ರಂದು ವಿತ್ತ ಸಚಿವರು ಬಜೆಟ್ ಮಂಡಿಸಲಿದ್ದಾರೆ. ಒಟ್ಟಾರೆ ಎರಡು ಹಂತಗಳಲ್ಲಿ ನಡೆಯಲಿರುವ ಈ ಅಧಿವೇಶನದ ಮೊದಲ ಭಾಗ ಮೂರು ವಾರಗಳು ಹಾಗೂ ಎರಡನೇ ಭಾಗ ನಾಲ್ಕು ವಾರಗಳ ಕಾಲ ನಡೆಯಲಿದೆ. ಸತತ 9ನೇ ಬಾರಿ ಬಜೆಟ್ ಮಂಡಿಸುವ ಮೂಲಕ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೊಸ ದಾಖಲೆ ಬರೆಯಲಿದ್ದಾರೆ.





Comments