ಸಿಇಟಿ 2026ರ ವೇಳಾಪಟ್ಟಿ ಪ್ರಕಟ: ಏಪ್ರಿಲ್ 22ರಿಂದ ಪರೀಕ್ಷೆಗಳು ಆರಂಭ
- sathyapathanewsplu
- Jan 2
- 1 min read

ಬೆಂಗಳೂರು: ರಾಜ್ಯದ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆ (CET-2026) ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಅವರು ಜಂಟಿಯಾಗಿ ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದರು. ಪರೀಕ್ಷೆಗಳು ಏಪ್ರಿಲ್ 22ರಿಂದ 24ರವರೆಗೆ ನಡೆಯಲಿದ್ದು, ಜನವರಿ 17ರಿಂದಲೇ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಈ ಬಾರಿ ಸಿಇಟಿ ವೇಳಾಪಟ್ಟಿಯೊಂದಿಗೆ ಪಿಜಿಸಿಇಟಿ (PGCET), ಕೆಸೆಟ್ (KSET) ಮತ್ತು ಡಿಸಿಇಟಿ (DCET) ಪರೀಕ್ಷೆಗಳ ದಿನಾಂಕಗಳನ್ನೂ ಮುಂಚಿತವಾಗಿಯೇ ಘೋಷಿಸಲಾಗಿದೆ. ವೇಳಾಪಟ್ಟಿಯ ಪ್ರಕಾರ, ಏಪ್ರಿಲ್ 22ರಂದು ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಕನ್ನಡ ಭಾಷಾ ಪರೀಕ್ಷೆ ನಡೆಯಲಿದೆ. ಏಪ್ರಿಲ್ 23ರಂದು ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಹಾಗೂ ಏಪ್ರಿಲ್ 24ರಂದು ಗಣಿತ ಮತ್ತು ಜೀವಶಾಸ್ತ್ರ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಕೆಯ ಹಂತದಲ್ಲಿ ಎದುರಾಗುವ ಗೊಂದಲಗಳನ್ನು ನಿವಾರಿಸಲು ಮತ್ತು ಮಾರ್ಗದರ್ಶನ ನೀಡಲು 'ವಿದ್ಯಾರ್ಥಿ ದಿಕ್ಸೂಚಿ' ಎಂಬ ಮಾಹಿತಿ ಪುಸ್ತಕವನ್ನು ಇದೇ ವೇಳೆ ಬಿಡುಗಡೆ ಮಾಡಲಾಯಿತು.
ಸ್ನಾತಕೋತ್ತರ ಮತ್ತು ಇತರ ವೃತ್ತಿಪರ ಕೋರ್ಸ್‌ಗಳ ವೇಳಾಪಟ್ಟಿಯನ್ನು ಗಮನಿಸುವುದಾದರೆ, ಮೇ 14ರಂದು MBA ಮತ್ತು MCA ಅಭ್ಯರ್ಥಿಗಳಿಗೆ PGCET ನಡೆಯಲಿದೆ. ಮೇ 23ರಂದು ಎಂ.ಟೆಕ್ ಮತ್ತು ಡಿಸಿಇಟಿ ಪರೀಕ್ಷೆಗಳು ನಿಗದಿಯಾಗಿವೆ. ಜುಲೈ 18ರಂದು ನರ್ಸಿಂಗ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್ ಸ್ನಾತಕೋತ್ತರ ಪರೀಕ್ಷೆಗಳು, ಅಕ್ಟೋಬರ್ 11ರಂದು ಕೆಸೆಟ್ ಮತ್ತು ನವೆಂಬರ್ 21ರಂದು ಎಂ-ಫಾರ್ಮಾ ಪರೀಕ್ಷೆಗಳು ನಡೆಯಲಿವೆ. ಪರೀಕ್ಷಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡಲು ಮತ್ತು ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಮಾಹಿತಿ ತಲುಪಿಸಲು ಪ್ರಾಧಿಕಾರವು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.





Comments