ಬಿಗ್ ಬಾಸ್ ಕನ್ನಡ ಸೀಸನ್ 12: ಹಳ್ಳಿ ಹೈದ 'ಗಿಲ್ಲಿ ನಟರಾಜ್' ಮುಡಿಗೆ ವಿಜಯದ ಪಟ್ಟ!
- sathyapathanewsplu
- 4 days ago
- 1 min read

ಬೆಂಗಳೂರು: ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ 'ಬಿಗ್ ಬಾಸ್ ಕನ್ನಡ ಸೀಸನ್ 12' ಕ್ಕೆ ಅದ್ಧೂರಿ ತೆರೆ ಬಿದ್ದಿದೆ. ಕಳೆದ ಹಲವು ವಾರಗಳಿಂದ ಕುತೂಹಲ ಕೆರಳಿಸಿದ್ದ ಗ್ರ್ಯಾಂಡ್ ಫಿನಾಲೆಯಲ್ಲಿ, ಕನ್ನಡಿಗರ ಮನಗೆದ್ದಿದ್ದ 'ಹಳ್ಳಿ ಹೈದ' ಗಿಲ್ಲಿ ನಟರಾಜ್ ಅಂತಿಮವಾಗಿ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಬಿಡದಿಯ ಬಿಗ್ ಬಾಸ್ ಮನೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ನಟರಾಜ್ ಟ್ರೋಫಿ ಎತ್ತಿ ಹಿಡಿಯುವ ಮೂಲಕ ಇತಿಹಾಸ ಬರೆದಿದ್ದಾರೆ. ಇನ್ನು ಮನೆಯ ಪ್ರಬಲ ಸ್ಪರ್ಧಿಯಾಗಿದ್ದ ರಕ್ಷಿತಾ ಶೆಟ್ಟಿ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
ಈ ಬಾರಿಯ ಫಿನಾಲೆಯಲ್ಲಿ ಗಿಲ್ಲಿ ನಟರಾಜ್, ಅಶ್ವಿನಿ, ಕಾವ್ಯ, ರಕ್ಷಿತಾ, ಧನುಷ್ ಮತ್ತು ರಘು ಅಂತಿಮ ಕಣದಲ್ಲಿದ್ದರು. ಒಬ್ಬೊಬ್ಬರಾಗಿ ಎಲಿಮಿನೇಟ್ ಆಗುತ್ತಾ ಬಂದಂತೆ ವೇದಿಕೆಯ ಮೇಲೆ ಅಂತಿಮವಾಗಿ ನಟರಾಜ್ ಮತ್ತು ರಕ್ಷಿತಾ ಉಳಿದುಕೊಂಡಿದ್ದರು. ಮನೆಯೊಳಗೆ ತಮ್ಮ ಮುಗ್ಧತೆ, ಆಟ ಮತ್ತು ಹಳ್ಳಿ ಸೊಗಡಿನ ಮಾತಿನ ಮೂಲಕವೇ ಮನೆಮಾತಾಗಿದ್ದ ಗಿಲ್ಲಿ ನಟರಾಜ್, ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ. ಇವರ ಈ ಸಾಧನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಗಿಲ್ಲಿ ನಟರಾಜ್ ಗೆಲುವು ಘೋಷಣೆಯಾಗುತ್ತಿದ್ದಂತೆ ಬಿಡದಿಯಲ್ಲಿರುವ ಬಿಗ್ ಬಾಸ್ ಮನೆಯ ಮುಂಭಾಗದಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ನೆಚ್ಚಿನ ನಟನ ಪರವಾಗಿ ಜೈಕಾರ ಕೂಗಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಾಮಾನ್ಯ ಹಿನ್ನೆಲೆಯಿಂದ ಬಂದು ಇಷ್ಟು ದೊಡ್ಡ ವೇದಿಕೆಯಲ್ಲಿ ಯಶಸ್ಸು ಸಾಧಿಸಿರುವುದು ಎಲ್ಲರಿಗೂ ಸ್ಫೂರ್ತಿಯಾಗಿದ್ದು, ಗಿಲ್ಲಿ ನಟರಾಜ್ ಅವರ ಬದುಕು ಈಗ ಹೊಸ ತಿರುವು ಪಡೆದುಕೊಂಡಿದೆ.





Comments