500 ರೂ. ನೋಟು ಅಮಾನ್ಯೀಕರಣ ಸುಳ್ಳು ಸುದ್ದಿ: ಸಾರ್ವಜನಿಕರಿಗೆ ಕೇಂದ್ರ ಸರ್ಕಾರದಿಂದ ಮಹತ್ವದ ಸ್ಪಷ್ಟನೆ
- sathyapathanewsplu
- Jan 4
- 1 min read

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಕಳೆದ ಕೆಲವು ದಿನಗಳಿಂದ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಲಿದೆ ಮತ್ತು ಮಾರ್ಚ್ ತಿಂಗಳಿನಿಂದ ಎಟಿಎಂಗಳಲ್ಲಿ ಈ ನೋಟುಗಳು ಲಭ್ಯವಿರುವುದಿಲ್ಲ ಎಂಬ ಸುದ್ದಿಗಳು ವ್ಯಾಪಕವಾಗಿ ವೈರಲ್ ಆಗುತ್ತಿವೆ. ಈ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರವು ಇವೆಲ್ಲವೂ ಕೇವಲ ವದಂತಿಗಳಾಗಿದ್ದು, ಇಂತಹ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದೆ. ಈ ಮೂಲಕ ಸಾರ್ವಜನಿಕರಲ್ಲಿ ಮೂಡಿದ್ದ ಆತಂಕಕ್ಕೆ ತೆರೆ ಎಳೆದಿದೆ.
ಸರ್ಕಾರದ ಪ್ರೆಸ್ ಇನ್ಫರ್ಮೇಷನ್ ಬ್ಯೂರೋ (PIB) ಅಡಿಯಲ್ಲಿ ಕಾರ್ಯನಿರ್ವಹಿಸುವ 'ಫ್ಯಾಕ್ಟ್ ಚೆಕ್' ತಂಡವು ಈ ಬಗ್ಗೆ ಅಧಿಕೃತವಾಗಿ ಟ್ವೀಟ್ ಮಾಡಿದ್ದು, ಭಾರತೀಯ ರಿಸರ್ವ್ ಬ್ಯಾಂಕ್ (RBI) 500 ರೂಪಾಯಿ ನೋಟುಗಳ ಚಲಾವಣೆಯನ್ನು ಕಡಿಮೆ ಮಾಡುತ್ತದೆ ಅಥವಾ ಎಟಿಎಂನಿಂದ ವಿತರಿಸುವುದನ್ನು ನಿಲ್ಲಿಸುತ್ತದೆ ಎಂಬ ಸುದ್ದಿಗಳು ಸಂಪೂರ್ಣ ಸುಳ್ಳು ಎಂದು ಖಚಿತಪಡಿಸಿದೆ. ಈ ಹಿಂದೆಯೂ ಕೂಡ 100 ರೂ. ನೋಟುಗಳನ್ನು ಮಾತ್ರ ಉಳಿಸಿ 500 ರೂ. ನೋಟುಗಳನ್ನು ನಿಷೇಧಿಸಲಾಗುತ್ತದೆ ಎಂಬ ವದಂತಿಗಳು ಹರಡಿದ್ದವು. ಕೇಂದ್ರ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಅವರು ಈ ಹಿಂದೆಯೇ ಸಂಸತ್ತಿನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿ, ಇಂತಹ ಯಾವುದೇ ಯೋಜನೆ ಇಲ್ಲ ಎಂದು ತಿಳಿಸಿದ್ದರು.
500 ರೂ. ನೋಟುಗಳು ಎಂದಿನಂತೆ ಚಲಾವಣೆಯಲ್ಲಿರುತ್ತವೆ ಮತ್ತು ಎಲ್ಲಾ ರೀತಿಯ ವಹಿವಾಟುಗಳಿಗೆ ಬಳಸಬಹುದಾಗಿದೆ. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಇಂತಹ ಹಾದಿತಪ್ಪಿಸುವ ಸುದ್ದಿಗಳನ್ನು ನಂಬಬಾರದು ಮತ್ತು ಯಾವುದೇ ಮಾಹಿತಿಯನ್ನು ಅಧಿಕೃತ ಮೂಲಗಳಿಂದ ಬಂದಿದೆಯೇ ಎಂದು ಪರೀಕ್ಷಿಸದೆ ಇತರರಿಗೆ ಹಂಚಬಾರದು ಎಂದು ಪಿಐಬಿ ಎಚ್ಚರಿಸಿದೆ. ಕಿಡಿಕೇಡಿಗಳು ಪದೇ ಪದೇ ಇಂತಹ ತಪ್ಪು ಮಾಹಿತಿಗಳನ್ನು ಹರಡುತ್ತಿದ್ದು, ಎಟಿಎಂಗಳಲ್ಲಿ 100, 200 ರೂಪಾಯಿ ನೋಟುಗಳ ಜೊತೆಗೆ 500 ರೂಪಾಯಿ ನೋಟುಗಳ ವಿತರಣೆಯೂ ಮುಂದುವರಿಯಲಿದೆ ಎಂದು ಇಲಾಖೆ ಖಚಿತಪಡಿಸಿದೆ.





Comments