ದೆಹಲಿಯಲ್ಲಿ 'ವಿಷಗಾಳಿ' ಅಟ್ಟಹಾಸ: ಹಳೆಯ ವಾಹನಗಳಿಗೆ ನಿರ್ಬಂಧ!
- sathyapathanewsplu
- 1 day ago
- 1 min read

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯದ ಮಟ್ಟ (AQI) 400ರ ಗಡಿ ದಾಟಿ 'ಅಪಾಯಕಾರಿ' ಹಂತ ತಲುಪಿದೆ. ದಟ್ಟ ಮಂಜು ಮತ್ತು ವಿಷಕಾರಿ ಹೊಗೆಯಿಂದಾಗಿ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಸರ್ಕಾರ ಇಂದಿನಿಂದ ಅತ್ಯಂತ ಕಠಿಣ ನಿಯಮಗಳನ್ನು ಜಾರಿಗೆ ತಂದಿದೆ.
ಮನೆ ಕೆಲಸಕ್ಕೆ (WFH) ಸೂಚನೆ
ಮಾಲಿನ್ಯ ನಿಯಂತ್ರಿಸುವ ಭಾಗವಾಗಿ ಸರ್ಕಾರಿ ಮತ್ತು ಖಾಸಗಿ ಕಚೇರಿಗಳ ಶೇ. 50ರಷ್ಟು ಸಿಬ್ಬಂದಿಗೆ 'ವರ್ಕ್ ಫ್ರಂ ಹೋಮ್' (Work From Home) ಮಾಡಲು ಸರ್ಕಾರ ಸೂಚಿಸಿದೆ. ರಸ್ತೆಗಳಲ್ಲಿ ವಾಹನಗಳ ಸಂಚಾರ ಕಡಿಮೆ ಮಾಡುವ ಮೂಲಕ ಹೊಗೆಯ ಪ್ರಮಾಣ ತಗ್ಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಗಡಿಗಳಲ್ಲಿ ಹದ್ದಿನ ಕಣ್ಣು: 12 ಲಕ್ಷ ವಾಹನಗಳಿಗೆ ನಿರ್ಬಂಧ?
ಇಂದಿನಿಂದ ಜಾರಿಗೆ ಬಂದಿರುವ ಕಠಿಣ ನಿಯಮಗಳ ಅಡಿಯಲ್ಲಿ, ಬಿಎಸ್-VI (BS-6) ಎಂಜಿನ್ ಹೊಂದಿರದ ಹಳೆಯ ವಾಹನಗಳಿಗೆ ದೆಹಲಿ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ದೆಹಲಿ ಸಮೀಪದ ನೋಯ್ಡಾ, ಗುರುಗ್ರಾಮ್, ಗಾಜಿಯಾಬಾದ್ ಮತ್ತು ಫರಿದಾಬಾದ್‌ನಿಂದ ಪ್ರತಿದಿನ ಸಂಚರಿಸುವ ಸುಮಾರು 12 ಲಕ್ಷ ವಾಹನಗಳ ಮೇಲೆ ಈ ನಿಯಮ ಪ್ರಭಾವ ಬೀರಲಿದೆ.
* ವಾಹನಗಳ ವಿವರ: ನೋಯ್ಡಾದಿಂದ 4 ಲಕ್ಷ, ಗಾಜಿಯಾಬಾದ್‌ನಿಂದ 5.5 ಲಕ್ಷ ಹಾಗೂ ಗುರುಗ್ರಾಮ್‌ನಿಂದ 2 ಲಕ್ಷಕ್ಕೂ ಅಧಿಕ ಬಿಎಸ್-6 ಅಲ್ಲದ ವಾಹನಗಳನ್ನು ತಡೆಯುವ ಸಾಧ್ಯತೆಯಿದೆ.
* ಪೊಲೀಸ್ ಕಾವಲು: ವಾಹನಗಳ ತಪಾಸಣೆಗಾಗಿ ಗಡಿಭಾಗದ 126 ಚೆಕ್‌ಪೋಸ್ಟ್‌ಗಳಲ್ಲಿ 580 ಪೊಲೀಸ್ ಸಿಬ್ಬಂದಿ ಹಾಗೂ 37 ಸ್ಪೀಡ್ ಚೆಕ್ ವಾಹನಗಳನ್ನು ನಿಯೋಜಿಸಲಾಗಿದೆ.
PUC ಇಲ್ಲದಿದ್ದರೆ ಪೆಟ್ರೋಲ್ ಇಲ್ಲ!
ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ (PUC) ಇಲ್ಲದ ವಾಹನಗಳಿಗೆ ದೆಹಲಿಯ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ವಾಯು ಮಾಲಿನ್ಯದ ಜೊತೆಗೆ ಕಡಿಮೆ ಗೋಚರತೆಯಿಂದಾಗಿ (Low Visibility) ಅಪಘಾತಗಳ ಭಯವೂ ಹೆಚ್ಚಾಗಿದ್ದು, ವಾಹನ ಸವಾರರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.






Comments