ಶಬರಿಮಲೆ ಯಾತ್ರೆ: ಎರಡೇ ದಿನದಲ್ಲಿ 2 ಲಕ್ಷ ಭಕ್ತರ ಆಗಮನ, ಭಾರಿ ನೂಕುನುಗ್ಗಲು, ಓರ್ವ ಭಕ್ತ ಮಹಿಳೆ ಸಾವು
- sathyapathanewsplu
- Nov 19
- 1 min read

ಪ್ರಸಿದ್ಧ ವಾರ್ಷಿಕ ಶಬರಿಮಲೆ ಅಯ್ಯಪ್ಪನ 'ಮಂಡಲ ಮಕರವಿಳಕ್ಕು' ಯಾತ್ರೆ ಆರಂಭವಾದ ಎರಡನೇ ದಿನದಲ್ಲಿ ಭಾರಿ ಅವ್ಯವಸ್ಥೆ ಉಂಟಾಗಿದ್ದು, ಕರ್ನಾಟಕದ ಭಕ್ತರು ಸೇರಿದಂತೆ ಕೇವಲ 48 ಗಂಟೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದಾರೆ. ನಿರೀಕ್ಷೆಗೂ ಮೀರಿದ ಭಕ್ತರ ದಂಡು ಆಗಮಿಸಿದ ಕಾರಣ ಅಯ್ಯಪ್ಪನ ಸನ್ನಿಧಿಯ 18 ಮೆಟ್ಟಿಲುಗಳ ಬಳಿ ಭಾರೀ ನೂಕುನುಗ್ಗಲು ವಾತಾವರಣ ಸೃಷ್ಟಿಯಾಗಿದೆ. ಈ ಅವ್ಯವಸ್ಥೆಗಳ ನಡುವೆ, ದರ್ಶನಕ್ಕಾಗಿ ಸರದಿಯಲ್ಲಿ ನಿಂತಿದ್ದ ಕಲ್ಲಿಕೋಟೆ ಮೂಲದ 58 ವರ್ಷದ ಮಹಿಳಾ ಭಕ್ತರೊಬ್ಬರು ಕುಸಿದು ಸಾವನ್ನಪ್ಪಿರುವ ದುರಂತ ಸಂಭವಿಸಿದೆ.
ದೇವಸ್ಥಾನದ ಬಾಗಿಲು ತೆರೆದ ಎರಡೇ ದಿನದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭಕ್ತರು ಆಗಮಿಸಿರುವುದರಿಂದ ಅವರನ್ನು ನಿಯಂತ್ರಿಸಲು ತಿರುವಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಮತ್ತು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸಾಮಾನ್ಯವಾಗಿ ನಿತ್ಯ 90 ಸಾವಿರ ಮಂದಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಲಾಗಿದ್ದರೂ, ಈ ಬಾರಿ ಮಿತಿ ಮೀರಿದ ಸಂಖ್ಯೆಯಲ್ಲಿ ಭಕ್ತರು ಆಗಮಿಸಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ. ಇದರ ಪರಿಣಾಮವಾಗಿ, ಪ್ರಸ್ತುತ ಅಯ್ಯಪ್ಪನ ದರ್ಶನ ಪಡೆಯಲು ಭಕ್ತರಿಗೆ 10 ಗಂಟೆಗೂ ಹೆಚ್ಚಿನ ಅವಧಿ ಹಿಡಿಯುತ್ತಿದ್ದು, ಇದರಿಂದ ಬೇಸತ್ತ ಹಲವು ಭಕ್ತರು ದರ್ಶನ ಸಾಧ್ಯವಾಗದೆ ಪಂಪಾದಲ್ಲಿ ತುಪ್ಪದ ಸೇವೆ ಸಲ್ಲಿಸಿ ವಾಪಸಾಗುತ್ತಿದ್ದಾರೆ.
ಪಂಬಾ ತಪ್ಪಲಿನಿಂದ ಸನ್ನಿಧಾನದವರೆಗಿನ ಇಡೀ ದಾರಿ ಭಕ್ತರಿಂದ ಕಿಕ್ಕಿರಿದು ತುಂಬಿದ್ದು, ಇಲ್ಲಿ 3-4 ಗಂಟೆಗಳ ಕಾಲ ಸರದಿಯಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇದರ ಜೊತೆಗೆ, ಹಲವು ಭಕ್ತರು ಕುಡಿಯುವ ನೀರು ಸೇರಿ ಅಗತ್ಯ ಮೂಲಸೌಲಭ್ಯಗಳ ಕೊರತೆಯಿಂದ ಪರದಾಡುತ್ತಿದ್ದಾರೆ. ಶೌಚಾಲಯಗಳು ಶುಚಿಯಾಗಿಲ್ಲ ಎಂಬ ಆಕ್ರೋಶವೂ ಹೆಚ್ಚಾಗಿದೆ. ಈ ಎಲ್ಲಾ ಅವ್ಯವಸ್ಥೆಗಳ ನಡುವೆಯೇ, ಸರದಿಯಲ್ಲಿ ನಿಂತಿದ್ದ ಸತಿ (58) ಎಂಬ ಭಕ್ತ ಮಹಿಳೆ ಏಕಾಏಕಿ ಕುಸಿದು ಮೃತಪಟ್ಟಿದ್ದಾರೆ. ಮೃತರ ದೇಹವನ್ನು ತವರಿಗೆ ಕಳುಹಿಸಲಾಗಿದ್ದು, ಸಾವಿಗೆ ನಿಖರ ಕಾರಣವನ್ನು ಅಧಿಕಾರಿಗಳು ಇನ್ನೂ ಸ್ಪಷ್ಟಪಡಿಸಿಲ್ಲ.






Comments