ವಿಟ್ಲದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ: ಪೊಲೀಸರಿಂದ ತನಿಖೆ ಆರಂಭ
- sathyapathanewsplu
- Nov 10
- 1 min read

ವಿಟ್ಲ: ವಿಟ್ಲ ಪಟ್ಟಣದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಸಮೀಪದ ಮೋರಿಯೊಂದರಲ್ಲಿ ವ್ಯಕ್ತಿಯ ಶವವೊಂದು ಪತ್ತೆಯಾಗಿದ್ದು, ಸುತ್ತಮುತ್ತಲ ಪ್ರದೇಶದಲ್ಲಿ ಆತಂಕ ಮೂಡಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಸಮೀಪದ ಕೋಟಿಕೆರೆ ನಿವಾಸಿ ಮಂಜುನಾಥ್ (55) ಎಂದು ಗುರುತಿಸಲಾಗಿದೆ. ಅಡಿಕೆ ಗಾರ್ಬಲಿನಲ್ಲಿ ಕೆಲಸ ಮಾಡುತ್ತಿದ್ದ ಇವರು, ಭಾನುವಾರ ರಾತ್ರಿ 9.30ರ ನಂತರ ನಾಪತ್ತೆಯಾಗಿದ್ದರು ಎಂದು ತಿಳಿದುಬಂದಿದೆ.
ಸೋಮವಾರ ಬೆಳಿಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಾರ್ವಜನಿಕರಿಗೆ ಮೋರಿಯಲ್ಲಿದ್ದ ಸ್ವಲ್ಪ ನೀರಿನಲ್ಲಿ ಶವ ತೇಲುತ್ತಿರುವುದು ಕಂಡುಬಂದಿದೆ. ತಕ್ಷಣ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತ ಮಂಜುನಾಥ್‌ಗೆ ಕುಡಿತದ ಚಟವಿತ್ತು ಎನ್ನಲಾಗಿದ್ದು, ಅವರು ಆಕಸ್ಮಿಕವಾಗಿ ಮೋರಿಗೆ ಬಿದ್ದು ಸಾವನ್ನಪ್ಪಿದ್ದಾರೆಯೇ ಅಥವಾ ಬೇರೆ ಏನಾದರೂ ಕಾರಣಗಳಿವೆಯೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಇನ್ನೂ ತಿಳಿದುಬಂದಿಲ್ಲ.
ಘಟನೆಯ ಮಾಹಿತಿ ತಿಳಿದ ಕೂಡಲೇ ವಿಟ್ಲ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ್ ದೇವಾಡಿಗ ಮತ್ತು ಠಾಣಾಧಿಕಾರಿ ರಾಮಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮೇಲಕ್ಕೆತ್ತಿ ಕಾನೂನು ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದ್ದು, ಮಂಜುನಾಥ್ ಅವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.






Comments