ವಿಮಾನ ಪ್ರಯಾಣಿಕರಿಗೆ ಶಾಕ್: ಪವರ್‌ಬ್ಯಾಂಕ್‌ಗಳನ್ನು ಸಂಪೂರ್ಣ ನಿಷೇಧಿಸಿದ ಡಿಜಿಸಿಎ!
- sathyapathanewsplu
- Jan 5
- 1 min read

ಹೊಸದಿಲ್ಲಿ: ವಿಮಾನ ಪ್ರಯಾಣದ ವೇಳೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ), ಪವರ್‌ಬ್ಯಾಂಕ್‌ಗಳನ್ನು ವಿಮಾನದೊಳಗೆ ಕೊಂಡೊಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಪವರ್‌ಬ್ಯಾಂಕ್‌ಗಳನ್ನು ಹ್ಯಾಂಡ್ ಬ್ಯಾಗ್‌ಗಳಲ್ಲಿ ಕೊಂಡೊಯ್ಯಲು ಅವಕಾಶವಿತ್ತು. ಆದರೆ, ಇನ್ನು ಮುಂದೆ ಚೆಕ್-ಇನ್ ಲಗೇಜ್ ಮಾತ್ರವಲ್ಲದೆ, ಹ್ಯಾಂಡ್ ಬ್ಯಾಗ್‌ಗಳಲ್ಲೂ ಪವರ್‌ಬ್ಯಾಂಕ್ ಅಥವಾ ಯಾವುದೇ ರೀತಿಯ ಹೆಚ್ಚುವರಿ ಲೀಥಿಯಂ ಬ್ಯಾಟರಿಗಳನ್ನು ಕೊಂಡೊಯ್ಯುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಪವರ್‌ಬ್ಯಾಂಕ್‌ಗಳಲ್ಲಿ ಬಳಸಲಾಗುವ ಲೀಥಿಯಂ ಬ್ಯಾಟರಿಗಳು ತಾಂತ್ರಿಕ ಕಾರಣಗಳಿಂದಾಗಿ ಅತಿಯಾಗಿ ಕಾಯಬಹುದು ಅಥವಾ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಅಗ್ನಿ ಅವಘಡಗಳಿಗೆ ಕಾರಣವಾಗಬಹುದು ಎಂಬ ಆತಂಕವನ್ನು ಡಿಜಿಸಿಎ ವ್ಯಕ್ತಪಡಿಸಿದೆ. ವಿಮಾನದ ಹಾರಾಟದ ಸಮಯದಲ್ಲಿ ಇಂತಹ ಸ್ಫೋಟಗಳು ಸಂಭವಿಸಿದರೆ ದೊಡ್ಡ ಮಟ್ಟದ ಅಪಾಯವಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ವಿಮಾನದೊಳಗೆ ಪವರ್‌ಬ್ಯಾಂಕ್ ಬಳಕೆ ಮತ್ತು ಅವುಗಳ ಚಾರ್ಜಿಂಗ್‌ಗೆ ಯಾವುದೇ ಕಾರಣಕ್ಕೂ ಆಸ್ಪದ ನೀಡದಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಈ ಹೊಸ ನಿಯಮವನ್ನು ಜಾರಿಗೆ ತರಲು ವಿಮಾನ ನಿಲ್ದಾಣಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸುವಂತೆ ಆದೇಶಿಸಲಾಗಿದೆ. ಪ್ರಯಾಣಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸಲು ವಿಮಾನಯಾನ ಸಂಸ್ಥೆಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಮತ್ತು ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಡಿಜಿಸಿಎ ತಿಳಿಸಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಪ್ರಯಾಣಿಕರು ವಿಮಾನ ಹತ್ತುವ ಮುನ್ನ ತಮ್ಮ ಬ್ಯಾಗ್‌ಗಳಲ್ಲಿರುವ ಪವರ್‌ಬ್ಯಾಂಕ್‌ಗಳನ್ನು ಮೊದಲೇ ತೆರವುಗೊಳಿಸುವುದು ಅನಿವಾರ್ಯವಾಗಿದೆ.





Comments