ಜ.22ರಿಂದ ವಿಧಾನಮಂಡಲ ಜಂಟಿ ಅಧಿವೇಶನ: 'ವಿಬಿ-ಜಿ ರಾಮ್ ಜಿ' ಕಾಯ್ದೆ ವಿರುದ್ಧ ಗುಡುಗಲು ರಾಜ್ಯ ಸರ್ಕಾರ ಸನ್ನದ್ಧ
- sathyapathanewsplu
- Jan 15
- 1 min read

ಬೆಂಗಳೂರು: ಕೇಂದ್ರ ಸರ್ಕಾರದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ರದ್ದತಿ ಮತ್ತು ಅದರ ಬದಲಿಗೆ ಜಾರಿಗೆ ತಂದಿರುವ 'ವಿಕಸಿತ ಭಾರತ್ ಜಿರಾಮಜಿ' (VB-G RAM G) ಕಾಯ್ದೆಯನ್ನು ವಿರೋಧಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಜನವರಿ 22ರಿಂದ 31ರವರೆಗೆ ವಿಧಾನಮಂಡಲದ ಜಂಟಿ ಅಧಿವೇಶನ ನಡೆಸಲು ಬುಧವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಧಿವೇಶನದ ಮೊದಲ ದಿನ ರಾಜ್ಯಪಾಲರು ಜಂಟಿ ಸದನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದು, ರಜಾ ದಿನಗಳನ್ನು ಹೊರತುಪಡಿಸಿ ಅಧಿವೇಶನದ ಒಟ್ಟು ದಿನಗಳ ಬಗ್ಗೆ ಸ್ಪೀಕರ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಮಾಹಿತಿ ನೀಡಿದ್ದಾರೆ.
ಸಚಿವ ಸಂಪುಟ ಸಭೆಯಲ್ಲಿ ಸುಮಾರು ಎರಡೂವರೆ ಗಂಟೆಗಳ ಕಾಲ ಮನ್ರೇಗಾ ಮತ್ತು ಹೊಸ ವಿಬಿ-ಜಿ ರಾಮ್ ಜಿ ಕಾಯ್ದೆಗಳ ಕುರಿತು ಸುದೀರ್ಘ ಚರ್ಚೆ ನಡೆದಿದೆ. ಕೇಂದ್ರದ ಹೊಸ ಕಾಯ್ದೆಯು ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳುತ್ತಿದೆ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಅಧಿಕಾರವನ್ನು ಕುಂಠಿತಗೊಳಿಸುತ್ತಿದೆ ಎಂದು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಹೊಸ ಕಾನೂನಿನ ವಿರುದ್ಧ ಸದನದಲ್ಲಿ ಸಮರ್ಥವಾಗಿ ವಾದ ಮಂಡಿಸಲು ಹೆಚ್.ಕೆ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣಬೈರೇಗೌಡ, ಶರಣಪ್ರಕಾಶ್ ಪಾಟೀಲ್ ಮತ್ತು ಸಂತೋಷ್ ಲಾಡ್ ಅವರನ್ನೊಳಗೊಂಡ ಐವರು ಸಚಿವರ ವಿಶೇಷ ತಂಡವನ್ನು ರಚಿಸಲಾಗಿದ್ದು, ಅಧಿವೇಶನದಲ್ಲಿ ಎಲ್ಲಾ ಶಾಸಕರು ಕಡ್ಡಾಯವಾಗಿ ಹಾಜರಿರುವಂತೆ ಸೂಚಿಸಲಾಗಿದೆ.
ಕೇಂದ್ರ ಸರ್ಕಾರದ ಈ ನಡೆಯನ್ನು 'ಜನವಿರೋಧಿ' ಎಂದು ಕರೆದಿರುವ ರಾಜ್ಯ ಸರ್ಕಾರ, ಅಧಿವೇಶನದಲ್ಲಿ ಇದರ ವಿರುದ್ಧ ಅಧಿಕೃತ ನಿರ್ಣಯ ಅಂಗೀಕರಿಸಲು ತಂತ್ರ ರೂಪಿಸಿದೆ. "ವಿಬಿ-ಜಿ ರಾಮ್ ಜಿ ಕಾಯ್ದೆ-2025" ಸಮಾಜದ ಮೇಲೆ ಬೀರುವ ದುಷ್ಪರಿಣಾಮಗಳ ಬಗ್ಗೆ ಜಂಟಿ ಅಧಿವೇಶನದಲ್ಲಿ ಚರ್ಚಿಸಿ, ಕೇಂದ್ರಕ್ಕೆ ಪ್ರಬಲ ವಿರೋಧ ದಾಖಲಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇದಲ್ಲದೆ, ರಾಜ್ಯಪಾಲರ ಭಾಷಣದ ಕರಡನ್ನು ಅನುಮೋದಿಸಲು ಮುಖ್ಯಮಂತ್ರಿಗಳಿಗೆ ಪರಮಾಧಿಕಾರ ನೀಡಲಾಗಿದ್ದು, ಈ ಅಧಿವೇಶನದ ಮೂಲಕ ಕೇಂದ್ರದ ವಿರುದ್ಧ 'ಜನತಾ ನ್ಯಾಯಾಲಯ'ದಲ್ಲಿ ಹೋರಾಟ ರೂಪಿಸಲು ಕಾಂಗ್ರೆಸ್ ಸರ್ಕಾರ ಸಜ್ಜಾಗಿದೆ.





Comments